ADVERTISEMENT

ಪ್ರಕರಣಗಳ ತ್ವರಿತ ವಿಲೇವಾರಿಗೆ ಸೂಚನೆ: ಎ.ಎಸ್‌. ಓಕಾ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 12:54 IST
Last Updated 30 ಜನವರಿ 2021, 12:54 IST
   

ಹುಬ್ಬಳ್ಳಿ: ಹೈಕೋರ್ಟ್‌ ಸೆರಿದಂತೆ ವಿವಿಧ ನ್ಯಾಯಾಲಯಗಳಲ್ಲಿ 5 ರಿಂದ 10 ವರ್ಷಗಳ ಪ್ರಕರಣಗಳನ್ನು ಆದ್ಯತೆ ಮೇರೆಗೆ ತ್ವರಿತವಾಗಿ ವಿಚಾರಣೆ ಮಾಡುವಂತೆ ಸೂಚಿಸಲಾಗಿದೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಓಕಾ ಹೇಳಿದರು.

ಹುಬ್ಬಳ್ಳಿಯ ನೂತನ ನ್ಯಾಯಾಲಯ ಆವರಣದಲ್ಲಿ ₹ 9.8 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಹುಬ್ಬಳ್ಳಿ ವಕೀಲರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಶೇ50 ರಷ್ಟು ಪ್ರಕರಣಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಾದಿ ಅಥವಾ ಪ್ರತಿವಾದಿಯಾಗಿವೆ. ಹೆಚ್ಚಿನ ಸಂಖ್ಯೆಯಲ್ಲಿ ಬಾಕಿ ಪ್ರಕರಣಗಳಿರಬಾರದು. ಪ್ರಕರಣಗಳನ್ನು ತ್ವರಿತವಾಗಿ ಪರಿಹರಿಸುವಲ್ಲಿ ವಕೀಲರ ಸಹಾಯ ಅಗತ್ಯವಾಗಿದೆ ಎಂದರು.

ADVERTISEMENT

ರಾಜ್ಯ ಸರ್ಕಾರವು ನ್ಯಾಯಾಂಗ ವ್ಯವಸ್ಥೆಗೆ ಅಗತ್ಯ ಇರುವ ಮೂಲ ಸೌಕರ್ಯಗಳನ್ನು ಒದಗಿಸುತ್ತಿದೆ. ವಕೀಲರು ನಿರ್ಭೀತರಾಗಿ ಕಾರ್ಯ ನಿರ್ವಹಿಸಬೇಕು. ಸಂವಿಧಾನದ 21ನೇ ವಿಧಿಯನ್ವಯ ನಾಗರಿಕರಿಗೆ ನೀಡಿರುವ ಸ್ವಾತಂತ್ರ್ಯ ರಕ್ಷಣೆಯಲ್ಲಿ ವಕೀಲರ ಪಾತ್ರ ಮಹತ್ವವಾದ್ದಾಗಿದೆ. ನ್ಯಾಯಲಯ ಹಾಗೂ ವಕೀಲರ ಸಂಘ ಸಹಕಾರದಿಂದ ಕರ್ತವ್ಯ ನಿರ್ವಹಿಸಿದರೆ ನಾಗರಿಕರಿಗೆ ಉತ್ತಮ ನ್ಯಾಯದೊರಕಲಿದೆ ಎಂದು ಅಭಿಪ್ರಾಯಪಟ್ಟರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸುವಲ್ಲಿ ನ್ಯಾಯಾಂಗದ ಪಾತ್ರ ಮಹತ್ವದ್ದಾಗಿದೆ. ಕಾನೂನುಗಳಲ್ಲಿನ ದ್ವಂದ್ವಗಳನ್ನು ನಿವಾರಣೆ ಮಾಡಲಾಗುವುದು. ಸಾರ್ವಜನಿಕರ ಕಲ್ಯಾಣಕ್ಕಾಗಿ ಸರ್ಕಾರ ಮತ್ತು ನ್ಯಾಯಾಂಗ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ನ್ಯಾಯಾಂಗ ವೃತ್ತಿಯು ಪವಿತ್ರ ಕರ್ತವ್ಯವಾಗಿದೆ. ಆಡಳಿತಾತ್ಮಕ, ಪ್ರಜಾತಾಂತ್ರಿಕ ವ್ಯವಸ್ಥೆ ಸಶಕ್ತಗೊಳಿಸಲು ನ್ಯಾಯಾಂಗ ಕೊಡುಗೆ ನೀಡುತ್ತಿದೆ. ತ್ವರಿತ ನ್ಯಾಯದಾನ ಇಂದಿನ ಅಗತ್ಯವಾಗಿದ ಎಂದು ಹೇಳಿದರು.

ಹೈಕೋರ್ಟ್ ನ್ಯಾಯಮೂರ್ತಿ ಅಶೋಕ ನಿಜಗಣ್ಣವರ ಮಾತನಾಡಿದರು. ಹೈಕೋರ್ಟ್ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಶ್ರೀನಿವಾಸ ಹರೀಶಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಧಾರವಾಡ ಹೈಕೋರ್ಟ್ ಪೀಠದ ಹಿರಿಯ ನ್ಯಾಯಮೂರ್ತಿ ಜಿ.ನರೇಂದರ್, ಹೈಕೋರ್ಟ್ ನ್ಯಾಯಮೂರ್ತಿಗಳಾದ ಅಶೋಕ ನಿಜಗಣ್ಣವರ, ಶಿವಶಂಕರ್ ಬಿ.ಅಮರಣ್ಣವರ, ಪದ್ಮರಾಜ ಎನ್.ದೇಸಾಯಿ, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬದಾಮಿಕರ್, ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಉಮೇಶ್ ಅಡಿಗ ಉಪಸ್ಥಿತರಿದ್ದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಉಪವಿಭಾಗಾಧಿಕಾರಿ ಡಾ.ಬಿ.ಗೋಪಾಲಕೃಷ್ಣ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಬಿ. ಚೌಡಣ್ಣವರ ಇದ್ದರು.

ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ ಸ್ವಾಗತಿಸಿದರು. ಡಾ.ಜಿ.ಡಿ.ವಾರಂಗ್ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಗುರು ಹಿರೇಮಠ ವಂದಿಸಿದರು.

ಮಹಾತ್ಮ ಗಾಂಧೀಜಿ ಅವರ ಪುಣ್ಯ ತಿಥಿ ಅಂಗವಾಗಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.