ADVERTISEMENT

ನರೇಗಾ ಚರ್ಚೆ: ಕೇಂದ್ರ ಸಚಿವ ಕುಮಾರಸ್ವಾಮಿ‌ ವಿಧಾನಸಭೆಗೆ ಬರಲಿ; ರಮೇಶ್‌ ಬಾಬು

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 14:27 IST
Last Updated 11 ಜನವರಿ 2026, 14:27 IST
<div class="paragraphs"><p>ರಮೇಶ್‌ ಬಾಬು</p></div>

ರಮೇಶ್‌ ಬಾಬು

   

ಬೆಂಗಳೂರು: ‘ನರೇಗಾ ಯೋಜನೆಯ ಹೊಸ ಸ್ವರೂಪದ ಕುರಿತು ಬಹಿರಂಗ ಚರ್ಚೆಗೆ ವಿಶೇಷ ಅಧಿವೇಶನ ನಡೆಯಲಿದ್ದು, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ‌ಗೆ ಅಷ್ಟೊಂದು ಆಸಕ್ತಿ ಇದ್ದರೆ ರಾಷ್ಟ್ರಪತಿಯಿಂದ ಅನುಮತಿ ಪಡೆದು ಕರ್ನಾಟಕದ ವಿಧಾನಸಭೆಯಲ್ಲಿ ಚರ್ಚೆಗೆ ಬರಲಿ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ, ವಿಧಾನಪರಿಷತ್ತಿನ ಸದಸ್ಯ ರಮೇಶ್ ಬಾಬು ಸವಾಲು ಹಾಕಿದ್ದಾರೆ.

‘ಹೊಸ ಕಾಯ್ದೆಯ ಮೂಲಕ ನರೇಗಾ ಯೋಜನೆಯನ್ನು ಜನವಿರೋಧಿಯಾಗಿ ಕೇಂದ್ರ ಸರ್ಕಾರ ರೂಪಿಸಿದೆ. ಕಾಯ್ದೆಯಲ್ಲಿರುವ ಅಂಶಗಳ ಚರ್ಚೆಗೆ ಅಧಿವೇಶನ ಕರೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಅಲ್ಲಿ ಬಹಿರಂಗ ಚರ್ಚೆಗೆ ಮುಕ್ತ ಅವಕಾಶವಿದೆ. ಆದರೆ, ಬಹಿರಂಗ ಚರ್ಚೆಗೆ ಸಿದ್ಧ ಎಂದು ಹೇಳುವ ಮೂಲಕ ಕುಮಾರಸ್ಮಾಮಿ ತಮ್ಮ ಬೌದ್ಧಿಕ ದಿವಾಳಿತನ ಸಾಬೀತುಪಡಿಸಿದ್ದಾರೆ’ ಎಂದು ಅವರು ಟೀಕಿಸಿದ್ದಾರೆ.

ADVERTISEMENT

‘ನರೇಗಾ ಯೋಜನೆಯ ಕುರಿತಂತೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ಚರ್ಚೆಗೆ ಮುಂದಾದಾಗ ಪಲಾಯನ ಮಾಡಿರುವ ಕೇಂದ್ರ ಸರ್ಕಾರಕ್ಕೆ ಕುಮಾರಸ್ವಾಮಿಯವರ ಸಲಹೆಯ ಅವಶ್ಯ ಇದೆ’ ಎಂದೂ ವ್ಯಂಗ್ಯವಾಡಿದ್ದಾರೆ.

‘ಕುಮಾರಸ್ವಾಮಿಗೆ ಕರ್ನಾಟಕದ ಬಗ್ಗೆ ಬದ್ಧತೆ ಇದ್ದರೆ ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಹುಬ್ಬಳ್ಳಿ – ಬೆಳಗಾವಿ – ವಿಜಯಪುರ ವಿಮಾನ ನಿಲ್ದಾಣ ವಿಸ್ತರಣೆ, ರಕ್ಷಣಾ ಕೈಗಾರಿಕಾ ಕಾರಿಡಾರ್‌ಗಳು, ಏರೋಸ್ಪೇಸ್ ಮತ್ತು ಡಿಫೆನ್ಸ್ ಕೈಗಾರಿಕಾ ಪಾರ್ಕ್‌ಗಳು, ಬಹು–ಜಿಲ್ಲಾ ಕೈಗಾರಿಕಾ ಪಾರ್ಕ್, ಬೆಂಗಳೂರು ಉಪನಗರ ರೈಲು ಯೋಜನೆ, ಮೇಕೆದಾಟು, ಯುಕೆಪಿ ಮೂರನೇ ಹಂತ, ಕಳಸಾ ಬಂಡೂರಿ ಮುಂತಾದ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಲಿ’ ಎಂದೂ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.