ಸಿದ್ದರಾಮಯ್ಯ
ಬೆಳಗಾವಿ: ‘ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೆಸರು ಮತ್ತು ಸ್ವರೂಪ ಬದಲಿಸುವ ಮೂಲಕ ಬಡ ಜನರ ಅನ್ನ ಕಸಿದುಕೊಳ್ಳಲು ಹೊರಟಿರುವ ಕೇಂದ್ರ ಸರ್ಕಾರದ ನಡೆಯ ವಿರುದ್ಧ ರಾಜ್ಯದಾದ್ಯಂತ ಹೋರಾಟ ನಡೆಸುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಕೇಂದ್ರ ಸರ್ಕಾರವು ತಾನೇ ಶೇ 100ರಷ್ಟು ವೆಚ್ಚ ಭರಿಸಬೇಕಿದ್ದ ನರೇಗಾ ಯೋಜನೆಯ ಸ್ವರೂಪ ಬದಲಿಸುವ ಮೂಲಕ, ಶೇ 40ರಷ್ಟು ವೆಚ್ಚದ ಹೊರೆಯನ್ನು ರಾಜ್ಯ ಸರ್ಕಾರಗಳ ತಲೆಗೆ ಕಟ್ಟಿದೆ’ ಎಂದಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ನರೇಗಾ ಯೋಜನೆಯ ಹೆಸರು ಬದಲಿಸುವ ಮೂಲಕ ಮಹಾತ್ಮ ಗಾಂಧಿ ಬಗೆಗಿನ ತನ್ನ ದ್ವೇಷವನ್ನು ಮತ್ತು ಯೋಜನೆಯ ಸ್ವರೂಪ ಬದಲಿಸುವ ಮೂಲಕ ಒಕ್ಕೂಟ ವ್ಯವಸ್ಥೆಯ ಬಗೆಗಿನ ತನ್ನ ವಿರೋಧವನ್ನು ಬಯಲು ಮಾಡಿಕೊಂಡಿದೆ’ ಎಂದಿದ್ದಾರೆ.
‘ವಿದೇಶದಲ್ಲಿ ಸುತ್ತಾಡುವಾಗ ಗಾಂಧಿ ಭಜನೆ ಮಾಡುವ ಮೋದಿ ಅವರು, ದೇಶದಲ್ಲಿ ಮಾತ್ರ ಗಾಂಧೀಜಿ ಹೆಸರನ್ನು ಅಳಿಸುವ ಹುನ್ನಾರ ನಡೆಸುತ್ತಲೇ ಇದ್ದಾರೆ. ಗಾಂಧೀಜಿ ಹಂತಕ ಗೋಡ್ಸೆಯನ್ನು ಮೆರೆಸಲು ಹೊರಟಿರುವ ಪರಿವಾರದಿಂದ ಬೇರೇನನ್ನು ನಿರೀಕ್ಷಿಸಲು ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.
‘ಬಡವರ ಅನ್ನದ ಬಟ್ಟಲಿಗೆ ಕೈಹಾಕಿರುವ, ಬಾಪೂಜಿಗೆ ಅವಮಾನ ಮಾಡಿರುವ, ರಾಜ್ಯ ಸರ್ಕಾರಗಳ ಕತ್ತು ಹಿಸುಕಲು ಹೊರಟಿರುವ ನರೇಂದ್ರ ಮೋದಿ ಅವರ ಸರ್ಕಾರದ ಈ ಜನವಿರೋಧಿ ನಿರ್ಧಾರವನ್ನು ಖಂಡಿಸುತ್ತೇವೆ. ಇದರ ವಿರುದ್ಧ ರಾಜ್ಯದಾದ್ಯಂತ ಹೋರಾಟ ಸಂಘಟಿಸುತ್ತೇವೆ’ ಎಂದು ಹೇಳಿದ್ದಾರೆ.
ಜತೆಗೆ, ‘ನರೇಗಾ ಯೋಜನೆಯನ್ನು ಅದರ ಮೂಲ ಸ್ವರೂಪದಲ್ಲಿಯೇ ಉಳಿಸಿಕೊಳ್ಳುವ ಹೊಣೆಯನ್ನು, ಅದರ ಫಲಾನುಭವಿಗಳೂ ಹೊತ್ತುಕೊಳ್ಳಬೇಕು. ರಾಜ್ಯದ ಬಿಜೆಪಿ ನಾಯಕರನ್ನು ಹಿಡಿದು ನಿಲ್ಲಿಸಿ, ಈ ಅನ್ಯಾಯದ ವಿರುದ್ಧ ಪಕ್ಷಾತೀತವಾಗಿ ದನಿ ಎತ್ತುವಂತೆ ಒತ್ತಡ ಹೇರಬೇಕು’ ಎಂದು ಕರೆ ನೀಡಿದ್ದಾರೆ.
ಇಂದು ಪ್ರತಿಭಟನೆ: ಡಿ.ಕೆ. ಶಿವಕುಮಾರ್
ಸುವರ್ಣ ವಿಧಾನಸೌಧ ( ಬೆಳಗಾವಿ): ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ (ನರೇಗಾ ಯೋಜನೆ) ಹೆಸರು ಬದಲಿಸಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧವಾಗಿ ಸುವರ್ಣ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಬುಧವಾರ ಪ್ರತಿಭಟನೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನರೇಗಾ ಯೋಜನೆಯನ್ನು ದುರ್ಬಲಗೊಳಿಸಲು ಮತ್ತು ಮಹಾತ್ಮ ಗಾಂಧಿ ಹೆಸರಿಗೆ ಚ್ಯುತಿ ತರುವ ಉದ್ದೇಶದೊಂದಿಗೆ ಯೋಜನೆ ಹೆಸರು ಬದಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅದನ್ನು ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ನೇತೃತ್ವದಲ್ಲಿ ಬೆಳಿಗ್ಗೆ 9.30ಕ್ಕೆ ಪ್ರತಿಭಟನೆ ನಡೆಸಲಾಗುವುದು. ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿಯೂ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಗುವುದು’ ಎಂದರು.
ನ್ಯಾಯಾಂಗ ವ್ಯವಸ್ಥೆಯಿಂದ ನ್ಯಾಯ: ‘ನ್ಯಾಷನಲ್ ಹೆರಾಲ್ಡ್’ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಆರೋಪಪಟ್ಟಿ ಸಂಬಂಧ ದೆಹಲಿ ವಿಶೇಷ ಕೋರ್ಟ್ ಆದೇಶದ ಕುರಿತಂತೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ‘ನ್ಯಾಷನಲ್ ಹೆರಾಲ್ಡ್, ಯಂಗ್ ಇಂಡಿಯಾ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಕಿರುಕುಳ ನೀಡುವ ಕೆಲಸ ಮಾಡುತ್ತಿತ್ತು. ಅದಕ್ಕೆ ದೆಹಲಿ ವಿಶೇಷ ನ್ಯಾಯಾಲಯ ಸರಿಯಾದ ಉತ್ತರ ನೀಡಿದೆ. ಜಾರಿ ನಿರ್ದೇಶನಾಲಯದ ಆರೋಪ ಪಟ್ಟಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ನ್ಯಾಯಾಂಗ ವ್ಯವಸ್ಥೆ ಗಟ್ಟಿಯಾಗಿದೆ ಎಂಬುದಕ್ಕೆ ಇದೇ ಸಾಕ್ಷಿ’ ಎಂದು ಹೇಳಿದರು.
‘ಇದೇ ಪ್ರಕರಣದಲ್ಲಿ ನನಗೆ ಮತ್ತು ನನ್ನ ಸಹೋದರ ಡಿ.ಕೆ. ಸುರೇಶ್ ಅವರಿಗೆ ದೆಹಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಅದಕ್ಕೆ ಎಫ್‌ಐಆರ್ ಸೇರಿದಂತೆ ಇತರ ದಾಖಲೆಗಳನ್ನು ನೀಡುವಂತೆ ಕೋರಿದ್ದೆವು. ಇದೀಗ ನ್ಯಾಯಾಲಯದ ತೀರ್ಪು ನಮಗೆ ನ್ಯಾಯ ದೊರಕುವಂತೆ ಮಾಡಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.