ADVERTISEMENT

ಎನ್‌ಇಪಿಯಲ್ಲಿ ಋಣಾತ್ಮಕ ಅಂಶಗಳೇ ಇಲ್ಲ: ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2021, 21:11 IST
Last Updated 12 ಅಕ್ಟೋಬರ್ 2021, 21:11 IST
2019–20ನೇ ಸಾಲಿನ ರಾಷ್ಟ್ರೀಯ ಎನ್‌.ಎಸ್‌.ಎಸ್‌.ಪ್ರಶಸ್ತಿಗೆ ಪಾತ್ರರಾಗಿದ್ದ (ಎಡದಿಂದ) ಸಿರೀಶ್‌ ಗೋವರ್ಧನ್‌ (ಅತ್ಯುತ್ತಮ ಸ್ವಯಂ ಸೇವಕ), ಡಾ.ಬಿ.ವಸಂತ ಶೆಟ್ಟಿ (ವಿಶ್ವವಿದ್ಯಾಲಯ ಮಟ್ಟದ ಅತ್ಯುತ್ತಮ ಸಂಯೋಜನಾಧಿಕಾರಿ), ಬಿಂದಿಯಾ ಶೆಟ್ಟಿ (ಅತ್ಯುತ್ತಮ ಸ್ವಯಂ ಸೇವಕಿ) ಮತ್ತು ಸುರೇಶಪ್ಪ ಕೆ.ಸಜ್ಜನ (ಕಾಲೇಜು ಮಟ್ಟದ ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿ) ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು–ಪ್ರಜಾವಾಣಿ ಚಿತ್ರ 
2019–20ನೇ ಸಾಲಿನ ರಾಷ್ಟ್ರೀಯ ಎನ್‌.ಎಸ್‌.ಎಸ್‌.ಪ್ರಶಸ್ತಿಗೆ ಪಾತ್ರರಾಗಿದ್ದ (ಎಡದಿಂದ) ಸಿರೀಶ್‌ ಗೋವರ್ಧನ್‌ (ಅತ್ಯುತ್ತಮ ಸ್ವಯಂ ಸೇವಕ), ಡಾ.ಬಿ.ವಸಂತ ಶೆಟ್ಟಿ (ವಿಶ್ವವಿದ್ಯಾಲಯ ಮಟ್ಟದ ಅತ್ಯುತ್ತಮ ಸಂಯೋಜನಾಧಿಕಾರಿ), ಬಿಂದಿಯಾ ಶೆಟ್ಟಿ (ಅತ್ಯುತ್ತಮ ಸ್ವಯಂ ಸೇವಕಿ) ಮತ್ತು ಸುರೇಶಪ್ಪ ಕೆ.ಸಜ್ಜನ (ಕಾಲೇಜು ಮಟ್ಟದ ಅತ್ಯುತ್ತಮ ಕಾರ್ಯಕ್ರಮ ಅಧಿಕಾರಿ) ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು–ಪ್ರಜಾವಾಣಿ ಚಿತ್ರ    

ಬೆಂಗಳೂರು: ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) ಸಮಾಜ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಸರಿಪಡಿಸಲು ಸಹಕಾರಿ. ಇದು ಸಮಾಜ, ವಿದ್ಯಾರ್ಥಿ ಹಾಗೂ ಶಿಕ್ಷಕ ಕೇಂದ್ರಿತವಾಗಿರುವ ನೀತಿ. ಋಣಾತ್ಮಕವಾದಂತಹ ಯಾವ ಅಂಶಗಳೂ ನೀತಿಯಲ್ಲಿ ಅಡಕವಾಗಿಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.

ರಾಜ್ಯ ಎನ್‌.ಎಸ್‌.ಎಸ್‌. ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎನ್‌.ಎಸ್‌.ಎಸ್‌. ರಾಜ್ಯ ಪ್ರಶಸ್ತಿ ಪ್ರದಾನ, ಎನ್‌.ಎಸ್‌.ಎಸ್‌. ಸ್ವಯಂ ಸೇವಕರ ನೋಂದಣಿ ಜಾಲತಾಣ ಲೋಕಾರ್ಪಣೆ, 100 ಜೀವನ ಕೌಶಲ ತರಬೇತಿ ಕಾರ್ಯಕ್ರಮಗಳ ಕೈಪಿಡಿ ಬಿಡುಗಡೆ ಹಾಗೂ ಯುವ ಸಹಾಯವಾಣಿ 155265 ಮತ್ತು ಯುವ ಸ್ಪಂದನ ಸಹಾಯ ಕೇಂದ್ರಗಳ ಅನಾವರಣ ಸಮಾರಂಭದಲ್ಲಿ ಮಾತನಾಡಿದರು.

‘ಎನ್ಇಪಿಯಲ್ಲಿ ಸಮಸ್ಯೆ, ಯೋಜನೆ ಹಾಗೂ ಸೇವೆ ಆಧರಿತ ಕಲಿಕೆಗಳಿಗೆ ಒತ್ತು ನೀಡಲಾಗುತ್ತದೆ. ಪಠ್ಯಕ್ರಮದಲ್ಲಿ ಇರುವುದನ್ನಷ್ಟೇ ಕಲಿತು ಪರೀಕ್ಷೆ ಬರೆದು ಉತ್ತೀರ್ಣರಾಗುವ ಈಗಿನ ಪದ್ಧತಿಗೆ ತಿಲಾಂಜಲಿ ಇಡಲಾಗುತ್ತದೆ. ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಸಮಾಜವೇ ಶಾಲೆ’ ಎಂದರು.

ADVERTISEMENT

‘ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯ ಕಾಣಲು ಸಾಧ್ಯವಿಲ್ಲ. ಅಕ್ಷರತೆ ಹೆಚ್ಚುತ್ತಿದ್ದರೂ ಕೂಡ ಸಮಸ್ಯೆಗಳು ಕಡಿಮೆಯಾಗುತ್ತಿಲ್ಲ. ಕಾನೂನು ಉಲ್ಲಂಘನೆ ಸಾಮಾನ್ಯವಾಗಿಬಿಟ್ಟಿದೆ.ಸಮಾಜದ ಬಗ್ಗೆ ಕಾಳಜಿ ಇಲ್ಲದವರು ಹಾಗೂ ಕಾನೂನು ಉಲ್ಲಂಘಿಸುವವರಿಗೆ ಯಾವ ಸ್ಥಾನಮಾನವನ್ನೂ ನೀಡಬಾರದು.ಎನ್‌.ಎಸ್‌.ಎಸ್‌ ಹಾಗೂ ಎನ್‌.ಸಿ.ಸಿಯನ್ನು ಮೊದಲು ಪಠ್ಯೇತರ ಚಟುವಟಿಕೆಗಳೆಂದು ಪರಿಗಣಿಸಲಾಗುತ್ತಿತ್ತು. ಈಗ ಪಠ್ಯ ಚಟುವಟಿಕೆಗಳಾಗಿ ಸೇರ್ಪಡೆ ಮಾಡಲಾಗಿದೆ. ಯುವಕರನ್ನು ದುಶ್ಚಟಗಳಿಂದ ದೂರ ಇಡಲು ಕ್ರೀಡೆ ಸಹಕಾರಿ. ಹೀಗಾಗಿ ಕ್ರೀಡೆಗೆ ಇನ್ನಷ್ಟು ಒತ್ತು ನೀಡುವ ಕೆಲಸ ಆಗಬೇಕು. ಬಜೆಟ್‌ನಲ್ಲೂ ಹೆಚ್ಚು ಅನುದಾನ ಒದಗಿಸಬೇಕು’ ಎಂದು ಹೇಳಿದರು.

ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ,‘2.35 ಲಕ್ಷ ಜನರಿಗೆ ಆನ್‌ಲೈನ್‌ ಮೂಲಕ ಎನ್‌.ಎಸ್‌.ಎಸ್‌ ಕುರಿತು ತರಬೇತಿ ನೀಡಲಾಗಿದೆ. ಇನ್ನೂ 5 ಲಕ್ಷಕ್ಕಿಂತ ಹೆಚ್ಚು ಜನರಿಗೆ ತರಬೇತಿ ಕೊಡಲು ಚಿಂತಿಸಲಾಗಿದೆ. ಅವರು ಪ್ರತಿ ಹಳ್ಳಿಗೂ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಮನಃ ಪರಿವರ್ತನೆ ಮಾಡಲು ಪ್ರಯತ್ನಿಸಲಿದ್ದಾರೆ’ ಎಂದರು.

120 ಮಂದಿಗೆ ಪ್ರಶಸ್ತಿ: ಕಾರ್ಯಕ್ರಮದಲ್ಲಿ 2017–18, 2018–19 ಹಾಗೂ 2019–20ನೇ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದ ಒಟ್ಟು 120 ಸ್ವಯಂಸೇವಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೋವಿಡ್‌ ಕಾರಣ ಕಳೆದ ಎರಡು ವರ್ಷ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.