ADVERTISEMENT

ಡಿಸೆಂಬರ್‌ 19ರಿಂದ ಹಂಪಿ ಪ್ರವಾಸಿಗರಿಗೆ ಆಫ್‌ಲೈನ್‌ನಲ್ಲೂ ಟಿಕೆಟ್‌

‘ಪ್ರಜಾವಾಣಿ’ ವರದಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 13:00 IST
Last Updated 18 ಡಿಸೆಂಬರ್ 2020, 13:00 IST
ಹಂಪಿ ಕಲ್ಲಿನ ರಥ
ಹಂಪಿ ಕಲ್ಲಿನ ರಥ   

ಹೊಸಪೇಟೆ: ವಿಶ್ವ ಪ್ರಸಿದ್ಧ ಹಂಪಿಯಲ್ಲಿ ಶನಿವಾರದಿಂದ (ಡಿ.19) ಪ್ರವಾಸಿಗರಿಗೆ ಆಫ್‌ಲೈನ್‌ನಲ್ಲೂ ಟಿಕೆಟ್‌ ಖರೀದಿಸುವ ಸೌಲಭ್ಯ ಒದಗಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎಎಸ್‌ಐ) ನಿರ್ಧರಿಸಿದೆ.

ಪ್ರವಾಸಿಗರು ತಾಲ್ಲೂಕಿನ ಕಮಲಾಪುರದ ಪುರಾತತ್ವ ಇಲಾಖೆಯ ವಸ್ತು ಸಂಗ್ರಹಾಲಯ, ವಿಜಯ ವಿಠಲ ದೇವಸ್ಥಾನ ಹಾಗೂ ಕಮಲ ಮಹಲ್‌ ಸ್ಮಾರಕದ ಕೌಂಟರ್‌ನಲ್ಲಿ ಟಿಕೆಟ್‌ ಖರೀದಿಸಬಹುದಾಗಿದೆ. ಅಲ್ಲದೇ ಪ್ರತಿ ದಿನ ಟಿಕೆಟ್‌ ಖರೀದಿ ಮೇಲೆ ಹೇರಿದ್ದ ಮಿತಿ ಕೂಡ ತೆಗೆದು ಹಾಕಲಾಗಿದೆ. ಈ ವಿಷಯವನ್ನು ಎಎಸ್‌ಐ ಹಂಪಿ ವೃತ್ತದ ಡೆಪ್ಯುಟಿ ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತು ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ. ಈ ಹಿಂದೆ ದಿನಕ್ಕೆ 2,000 ಜನರಿಗಷ್ಟೇ ಟಿಕೆಟ್‌ ಖರೀದಿಸಲು ಅವಕಾಶ ಕಲ್ಪಿಸಲಾಗಿತ್ತು.

ಲಾಕ್‌ಡೌನ್‌ ಸಡಿಲಿಕೆಗೊಂಡ ನಂತರ ಜುಲೈನಲ್ಲಿ ಹಂಪಿ ಸ್ಮಾರಕಗಳು ಪ್ರವಾಸಿಗರಿಗೆ ಬಾಗಿಲು ತೆರೆದಿದ್ದವು. ಆದರೆ, ಕೊರೊನಾ ಸೋಂಕು ಹರಡುತ್ತಿದ್ದರಿಂದ ಆಫ್‌ಲೈನ್‌ನಲ್ಲಿ ಟಿಕೆಟ್‌ ಕೊಡುವುದು ಸ್ಥಗಿತಗೊಳಿಸಲಾಗಿತ್ತು. ಸ್ಮಾರಕ ನೋಡ ಬಯಸುವವರು ಆನ್‌ಲೈನ್‌ನಲ್ಲಿ ಟಿಕೆಟ್‌ ಖರೀದಿಸಿ, ಅದನ್ನು ಡೌನ್‌ಲೋಡ್‌ ಮಾಡಿಕೊಂಡು ಸ್ಮಾರಕಗಳ ಪ್ರವೇಶ ದ್ವಾರದಲ್ಲಿನ ಭದ್ರತಾ ಸಿಬ್ಬಂದಿಗೆ ತೋರಿಸಿ ಹೋಗಬಹುದಾಗಿತ್ತು.

ADVERTISEMENT

ಹಂಪಿಯಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಿಗದ ಕಾರಣ ಪ್ರವಾಸಿಗರು ಆನ್‌ಲೈನ್‌ನಲ್ಲಿ ಟಿಕೆಟ್‌ ಖರೀದಿಸಲಾಗದೆ ಹಿಂತಿರುಗುತ್ತಿದ್ದರು. ದಿನಕ್ಕೆ 2,000 ಪ್ರವಾಸಿಗರಿಗಷ್ಟೇ ಟಿಕೆಟ್‌ ಖರೀದಿಸುವ ಅವಕಾಶ ಇದ್ದದ್ದರಿಂದ ಹೆಚ್ಚಿನವರಿಗೆ ಸಿಗುತ್ತಿರಲಿಲ್ಲ. ಈ ಕುರಿತು ‘ಪ್ರಜಾವಾಣಿ’ಯು ನವೆಂಬರ್‌ 10ರಂದು ‘ಹಂಪಿ: ಟಿಕೆಟ್‌ ಮಿತಿ; ಪ್ರವಾಸಿಗರಿಗೆ ಫಜೀತಿ’ ಶೀರ್ಷಿಕೆ ಅಡಿ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.