ADVERTISEMENT

ಆಗ ನೆರೆ, ಈಗ ಲಾಕ್‌ಡೌನ್‌ ‘ಬರೆ’

ಜಿಲ್ಲೆಯ ತೋಟಗಾರಿಕೆ ಬೆಳೆಗಾರರಿಗೆ ಸಂಕಷ್ಟ

ಎಂ.ಮಹೇಶ
Published 2 ಏಪ್ರಿಲ್ 2020, 19:30 IST
Last Updated 2 ಏಪ್ರಿಲ್ 2020, 19:30 IST
ಬೆಲೆ ಕುಸಿತದಿಂದ ಕಂಗಾಲಾಗಿರುವ ಬೂದಿಗೊಪ್ಪ ಗ್ರಾಮದ ನಾಗಪ್ಪ ಭರಮಪ್ಪ ಕೊಪ್ಪದ ಕಟಾವಿಗೆ ಬಂದಿರುವ ಬಾಳೆ ಗೊನೆಗಳನ್ನು ತೋರಿಸಿದರು
ಬೆಲೆ ಕುಸಿತದಿಂದ ಕಂಗಾಲಾಗಿರುವ ಬೂದಿಗೊಪ್ಪ ಗ್ರಾಮದ ನಾಗಪ್ಪ ಭರಮಪ್ಪ ಕೊಪ್ಪದ ಕಟಾವಿಗೆ ಬಂದಿರುವ ಬಾಳೆ ಗೊನೆಗಳನ್ನು ತೋರಿಸಿದರು   

ಬೆಳಗಾವಿ: ಹೋದ ವರ್ಷ ಉಂಟಾಗಿದ್ದ ನೆರೆ ಹಾಗೂ ಅತಿವೃಷ್ಟಿಯಿಂದ ನೊಂದು ಚೇತರಿಸಿಕೊಳ್ಳುತ್ತಿದ್ದ ತೋಟಗಾರಿಕೆ ಬೆಳೆಗಾರರ ಮೇಲೆ ಕೊರೊನಾ ವೈರಸ್‌ ಭೀತಿ ಮತ್ತು ಲಾಕ್‌ಡೌನ್‌ ಬಲವಾದ ಬರೆ ಎಳೆದಿದೆ.

ಕಳೆದ ವರ್ಷ ಪ್ರವಾಹ ಹಾಗೂ ಅತಿಯಾದ ಮಳೆಯಿಂದ ಬೆಳೆ ಜಮೀನಿನಲ್ಲೇ ಕೊಳೆತು ಹೋಗಿತ್ತು. ಈಗ, ಸಾಗಿಸುವುದಕ್ಕೆ ಸಾಧ್ಯವಾಗದೆ ಇರುವ ಕಾರಣದಿಂದ ತೋಟಗಳಲ್ಲೇ ಮಣ್ಣಾಗುತ್ತಿದೆ. ಬೆಳೆದವರಿಗೆ ಗಾಯದ ಮೇಲೆ ಗಾಯವಾಗುತ್ತಿದ್ದು, ಸಂಕಷ್ಟದ ಸುಳಿಗೆ ಅವರು ಸಿಲುಕಿದ್ದಾರೆ.

ಲಾಕ್‌ಡೌನ್‌ ಘೋಷಣೆ ಆಗಿರುವುದರಿಂದ ತರಕಾರಿ, ಹಣ್ಣು ಹಾಗೂ ಹೂವುಗಳಿಗೆ ಬೇಡಿಕೆ ಕುಸಿದಿದೆ. ಕಟಾವು ಮಾಡಿ ಸಾಗಿಸುವುದಕ್ಕೂ ನಿರ್ಬಂಧಗಳಿಂದ ಅಡ್ಡಿಯಾಗಿತ್ತು. ಕಷ್ಟಪಟ್ಟು ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಿದರೆ, ಉತ್ತಮ ಬೆಲೆ ದೊರೆಯುತ್ತಿಲ್ಲ. ಪರಿಣಾಮ, ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಸಾಗಣೆ ಹಾಗೂ ಕೂಲಿಗಾಗಿ ವೆಚ್ಚ ಮಾಡುವುದಕ್ಕಿಂತ ಜಮೀನಿನಲ್ಲೇ ಬಿಟ್ಟು ಬಿಡುವ ತೀರ್ಮಾನಕ್ಕೆ ಹಲವು ರೈತರು ಬಂದಿದ್ದಾರೆ. ಕೆಲವರು ಉಳುಮೆ ಮಾಡಿ ಬೆಳೆಯನ್ನು ಮಣ್ಣು ಪಾಲು ಮಾಡುತ್ತಿದ್ದಾರೆ.

ADVERTISEMENT

ಕಲ್ಲಂಗಡಿಗೆ ಬೇಡಿಕೆ ಇಲ್ಲ!:

ರಾಯಬಾಗ ತಾಲ್ಲೂಕು ಖೇಮಲಾಪುರ ಗ್ರಾಮದಲ್ಲಿ ₹ 10 ಲಕ್ಷ ಮೌಲ್ಯದ ಕಲ್ಲಂಗಡಿ ಹಣ್ಣನ್ನು ಮಾರುಕಟ್ಟೆಗೆ ಸಾಗಿಸಲಾಗದೆ ರೈತ ಸಿದ್ದೇಶ್ವರ ಸನದಿ ಅವರು ನಾಶಪಡಿಸಿದ್ದಾರೆ. ಮಾರ್ಕೆಟ್ ಸಂಪೂರ್ಣ ಸ್ತಬ್ಧವಾದ್ದರಿಂದ, ಎರಡೂವರೆ ಎಕರೆ ಜಮೀನಿನಲ್ಲಿನ ಬೆಳೆದಿದ್ದ ಬೆಳೆಯನ್ನು ನಾಶಪಡಿಸಿದ್ದಾರೆ. 40 ಟನ್ ಕಲ್ಲಂಗಡಿಯನ್ನು ಊರಿಗೆ ಉಚಿತವಾಗಿ ಹಂಚಿದ್ದಾರೆ. ಇನ್ನೂ 30 ಟನ್ ಕಲ್ಲಂಗಡಿ ಜಮೀನಿನಲ್ಲಿ ಉಳಿದಿದೆ ಎನ್ನುತ್ತಾರೆ ಅವರು. ಹೀಗೆ, ಹಲವು ರೈತರು ನಷ್ಟಕ್ಕೆ ಒಳಗಾಗಿದ್ದಾರೆ. ಬೆಳಗಾವಿ ತಾಲ್ಲೂಕಿನಲ್ಲಿ ಎಲೆಕೋಸು ಬೆಳೆದವರ ಬದುಕು ಬೀದಿಗೆ ಬಿದ್ದಿದೆ. ಬೇಡಿಕೆ ಕುಸಿದಿರುವುದರಿಂದ ಹೂಕೋಸು, ಎಲೆಕೋಸು, ಕಲ್ಲಂಗಡಿಗೆ ಸರಿಯಾದ ಬೆಲೆ ದೊರೆಯುತ್ತಿಲ್ಲ. ಇತರ ತರಕಾರಿ ಬೆಳೆದವರ ಸ್ಥಿತಿ ಕೂಡ ಭಿನ್ನವಾಗಿಲ್ಲ.

ಫೆಬ್ರುವರಿಯಲ್ಲಿ ಕೆ.ಜಿ.ಗೆ ಸರಾಸರಿ ₹ 14ರಿಂದ ₹ 18ರವರಗೆ ಸಿಗತ್ತಿದ್ದ ಬೆಲೆ ದಿಢೀರ್‌ ಕುಸಿತ ಕಂಡಿದೆ. ₹ 4ರಿಂದ ₹ 6ಕ್ಕೆ ಇಳಿದಿದೆ. ಇಷ್ಟು ಕಡಿಮೆ ಬೆಲೆಗೆ ಸಾಗಣೆ ಖರ್ಚು ಕೂಡ ಸಿಗುವುದಿಲ್ಲ ಎನ್ನುತ್ತಾರೆ ರೈತರು.

ಸರ್ಕಾರ ನೆರವಾಗಲಿ: ‘ಕುಟುಂಬದ ನಿರ್ವಹಣೆಗೆ ಹಾಗೂ ಆರ್ಥಿಕ ಸ್ಥಿತಿ ಸುಧಾರಿಸಲೆಂದು ಎರಡು ಎಕರೆಯಲ್ಲಿ ಬಾಳೆ ಬೆಳೆದಿದ್ದೆ. ಒಳ್ಳೆಯ ಬೆಳೆ ಬಂದಿದೆ. ಆದರೆ, ಕೊರೊನಾ ಹಾಗೂ ಲಾಕ್‌ಡೌನ್‌ನಿಂದಾಗಿ ಸರಿಯಾದ ಬೆಲೆ ಸಿಗುತ್ತಿಲ್ಲ. ಇದರಿಂದ ಸಾಲದ ಸುಳಿಗೆ ಸಿಲುಕಿದ್ದೇನೆ. ಸರ್ಕಾರ ನಮ್ಮಂತಹ ಬೆಳೆಗಾರರ ನೆರವಿಗೆ ಬರಬೇಕು’ ಎಂದು ಸವದತ್ತಿ ತಾಲ್ಲೂಕು ಬೂದಿಗೊಪ್ಪದ ರೈತ ನಾಗಪ್ಪ ಭರಮಪ್ಪ ಕೊಪ್ಪದ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಪ್ರಸ್ತುತ 13,700 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳಿವೆ. ಬಹುತೇಕ ಎಲ್ಲವೂ ಕಟಾವಿಗೆ ಬಂದಿವೆ. ಲಾಕ್‌ಡೌನ್‌ ಇಲ್ಲದಿದ್ದಿದ್ದರೆ ಎಲ್ಲ ಉತ್ಪನ್ನಗಳನ್ನ ರೈತರು ಮಾರುಕಟ್ಟೆಗೆ ಸಾಗಿಸಿ, ಒಂದಷ್ಟು ವರಮಾನ ಕಾಣುತ್ತಿದ್ದರು. ಬಿಸಿಲಿನ ಝಳ ಹೆಚ್ಚುತ್ತಿದ್ದರೂ ಕಲ್ಲಂಗಡಿಗೆ ಬೇಡಿಕೆ ಇಲ್ಲದಂತಾಗಿದೆ! ಇಲ್ಲಿಂದ ಗೋವಾ, ಮಹಾರಾಷ್ಟ್ರ, ಆಂಧ್ರ ಮೊದಲಾದ ಕಡೆಗಳಿಗೆ ಸಾಗಣೆ ನಡೆಯುತ್ತಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರವೀಂದ್ರ ಹಕಾಟೆ, ‘ತೋಟಗಾರಿಕೆ ಬೆಳೆಗಾರರ ಸಂಕಷ್ಟ ನಿವಾರಣೆಗೆ ಸರ್ಕಾರ ಸ್ಪಂದಿಸಿದೆ. ಉತ್ಪನ್ನಗಳ ಸಾಗಣೆ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಿದೆ. ಬೆಳೆಗಾರರು ಎಪಿಎಂಸಿಗಳಿಗೆ ತಂದು ಸಾಮಾಜಿಕ ಅಂತರ ಕಾಪಾಡಿಕೊಂಡು ಮಾರಬಹುದಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.