ADVERTISEMENT

ಒಂದಲ್ಲಾ ಒಂದು ದಿನ ನಾನು ನಿರಪರಾಧಿ ಎಂದು ಸಾಬೀತಾಗುತ್ತದೆ: ಡಿಕೆಶಿ 

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 13:24 IST
Last Updated 19 ಸೆಪ್ಟೆಂಬರ್ 2022, 13:24 IST
ವಿಚಾರಣೆಗಾಗಿ ದೆಹಲಿಯ ಇ.ಡಿ ಕಚೇರಿಗೆ ತೆರಳುತ್ತಿರುವ ಡಿ.ಕೆ ಶಿವಕುಮಾರ್‌ (ಪಿಟಿಐ ಚಿತ್ರ)
ವಿಚಾರಣೆಗಾಗಿ ದೆಹಲಿಯ ಇ.ಡಿ ಕಚೇರಿಗೆ ತೆರಳುತ್ತಿರುವ ಡಿ.ಕೆ ಶಿವಕುಮಾರ್‌ (ಪಿಟಿಐ ಚಿತ್ರ)    

ಬೆಂಗಳೂರು: ‘ಒಂದಲ್ಲಾ ಒಂದು ದಿನ ನಾನು ನಿರಪರಾಧಿ ಎಂಬುದು ಸಾಬೀತಾಗುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ವಿಶ್ವಾದ ನುಡಿಗಳನ್ನಾಡಿದ್ದಾರೆ.

ಸೋಮವಾರ ಟ್ವಿಟರ್‌ನಲ್ಲಿ ಪೋಸ್ಟ್‌ ಪ್ರಕಟಿಸಿರುವ ಅವರು, ‘ನನಗೆ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಸಂಪೂರ್ಣ ನಂಬಿಕೆ ಇದೆ. ಒಂದಲ್ಲಾ ಒಂದು ದಿನ ನಾನು ನಿರಪರಾಧಿ ಎಂದು ಸಾಬೀತಾಗುತ್ತದೆ. ರಾಜಕೀಯ ಸೇಡು, ಕಿರುಕುಳಕ್ಕೆ ಹೆದರುವವನು ನಾನಲ್ಲ. ಕರ್ನಾಟಕದ ಜನರ ಪರವಾಗಿ ಮಾತನಾಡಿದ್ದಕ್ಕೆ, ನಿರುದ್ಯೋಗ, ಬೆಲೆ ಏರಿಕೆಯಂತಹ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದಕ್ಕಾಗಿ ಈ ಬೆಲೆ ತೆರಬೇಕಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ಎರಡನೇ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ಸೋಮವಾರ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾದರು.

ADVERTISEMENT

ಮಧ್ಯ ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಇ.ಡಿ ಕಚೇರಿಗೆ ಮಧ್ಯಾಹ್ನ 12 ರ ಸುಮಾರಿಗೆ ಹಾಜರಾದರು. ಆದಾಯಕ್ಕೂ ಮೀರಿ ₹75 ಕೋಟಿ ಆಸ್ತಿ ಗಳಿಕೆ ಮಾಡಿರುವ ಆರೋಪ ಡಿಕೆ ಶಿವಕುಮಾರ್ ಅವರ ಮೇಲಿದೆ.

ಇನ್ನೊಂದೆಡೆ, ತೆರಿಗೆ ವಂಚನೆ ಪ್ರಕರಣಗಳನ್ನು ವಜಾಗೊಳಿಸಿರುವ ಹೈಕೋರ್ಟ್‌ ಆದೇಶದ ವಿರುದ್ಧ ಆದಾಯ ತೆರಿಗೆ ಇಲಾಖೆ (ಐಟಿ) ಸಲ್ಲಿಸಿರುವ ಅರ್ಜಿಯ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸುಪ್ರೀಂ ಕೋರ್ಟ್‌ ಸೋಮವಾರ ನೋಟಿಸ್‌ ಜಾರಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.