ADVERTISEMENT

ಒಂದು ಗ್ರಾಮ, ನಾಲ್ಕು ಶಾಲೆಗಳನ್ನು ದತ್ತು ಪಡೆದ ಸುದೀಪ್‌

ಆವಿಗೆ ಗ್ರಾಮಕ್ಕೆ ಆಗಲಿದೆ ಅಭಿವೃದ್ಧಿಯ ‘ಸುದೀಪ್ ಸ್ಪರ್ಶ’

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 22:28 IST
Last Updated 19 ಫೆಬ್ರುವರಿ 2021, 22:28 IST
ಸುದೀಪ್‌
ಸುದೀಪ್‌   

ಶಿವಮೊಗ್ಗ/ಬೆಂಗಳೂರು: ನಟ ಸುದೀಪ್‌ ಅವರು ‘ಕಿಚ್ಚ ಸುದೀಪ್‌ ಚಾರಿಟೆಬಲ್‌ ಸೊಸೈಟಿ’ಯ ಮೂಲಕ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆವಿಗೆ ಗ್ರಾಮ ಹಾಗೂ ಹಾಳಸಸಿ, ಎಂ.ಎಲ್‌. ಹಳ್ಳಿ, ಎಸ್‌.ಎನ್‌. ನಗರದ ಶಾಲೆಗಳನ್ನು ದತ್ತು ಪಡೆದಿದ್ದಾರೆ. ಆವಿಗೆ ಗ್ರಾಮ ಹಾಗೂ ನಾಲ್ಕು ಶಾಲೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾರೆ.

ಕರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆವಿಗೆ ಉಡುಪಿ–ಶಿವಮೊಗ್ಗ ಜಿಲ್ಲೆಯ ಗಡಿಗೆ ಹೊಂದಿಕೊಂಡಿದೆ. ಬುಡಕಟ್ಟು ಕುಣಬಿ ಜನಾಂಗದವರೇ ವಾಸಿಸುವ ಈ ಗ್ರಾಮದಲ್ಲಿ 27 ಮನೆಗಳಿದ್ದು, 157 ಜನರು ನೆಲೆಸಿದ್ದಾರೆ. ಕೂಲಿ ಕೆಲಸ ಹುಡುಕಿಕೊಂಡು ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳುವ ಅಲ್ಲಿನ ಕುಟುಂಬಗಳಲ್ಲಿ ಶೇ 99ರಷ್ಟು ಜನ ಅನಕ್ಷರಸ್ಥರಾಗಿದ್ದು, ಸಂಕಷ್ಟದ ಬದುಕು ನಡೆಸುತ್ತಿದ್ದಾರೆ. ಈ ಗ್ರಾಮದಲ್ಲಿ 1ನೇ ತರಗತಿಯಿಂದ 5ನೇ ತರಗತಿಯವರೆಗೆ ಇರುವ ಪ್ರಾಥಮಿಕ ಶಾಲೆಯಲ್ಲಿ 13 ಮಕ್ಕಳು ಕಲಿಯುತ್ತಿದ್ದಾರೆ.

ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕರೆತರಲು, ಸ್ಮಾರ್ಟ್‌ ತರಗತಿಗಳನ್ನು ಪರಿಚಯಿಸಲು ಹಾಗೂ ಮೂಲಸೌಕರ್ಯ ಒದಗಿಸಲು ಚಾರಿಟೆಬಲ್‌ ಸೊಸೈಟಿ ಮುಂದಾಗಿದೆ. ಮಾರ್ಚ್‌ನಲ್ಲಿ ದತ್ತು ಯೋಜನೆಗೆ ಚಾಲನೆ ನೀಡಲಾಗುತ್ತಿದೆ.

ADVERTISEMENT

‘ನಟ ಸುದೀಪ್‌ ಅವರು ಶಾಲೆಗಳನ್ನು ದತ್ತು ತೆಗೆದುಕೊಂಡು ಪೋಷಿಸುತ್ತಿರುವ ವಿಷಯ ತಿಳಿದು ಪತ್ರ ಬರೆದಿದ್ದೆ. ಮನವಿಗೆ ಸ್ಪಂದಿಸಿದ ಅವರು ಶಾಲೆ ದತ್ತು ತೆಗೆದುಕೊಳ್ಳಲು ಸಮ್ಮತಿಸಿದ್ದರು. ನಂತರ ಇಡೀ ಗ್ರಾಮವನ್ನೇ ದತ್ತು ಪಡೆಯಲು ನಿರ್ಧರಿಸಿದ್ದಾರೆ’ ಎಂದು ಶಿಕ್ಷಕ ಚಂದ್ರಪ್ಪ ಮಾಹಿತಿನೀಡಿದರು.

ಸಾಗರ ತಾಲ್ಲೂಕಿನ ಆವಿಗೆ ಗ್ರಾಮದ ಸರ್ಕಾರಿ ಶಾಲೆಗೆ ಕಿಚ್ಚ ಸುದೀಪ್‌ ಚಾರಿಟೆಬಲ್‌ ಸೊಸೈಟಿಯ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು. (ಸಂಗ್ರಹ ಚಿತ್ರ)

ಆವಿಗೆ ಗ್ರಾಮವೇ ಏಕೆ?: ‘ನಾವು ಆ ಗ್ರಾಮಕ್ಕೆ ಹೋಗಿದ್ದು, ಶಾಲೆಯನ್ನು ದತ್ತು ಪಡೆಯಲು. ಗ್ರಾಮದಲ್ಲಿರುವ ಒಂದೇ ಒಂದು ಶಾಲೆಗೆ ಮಕ್ಕಳು ಎಂಟು ಕಿ.ಮೀ ನಡೆದು ಬರಬೇಕು. ಸೂಕ್ತವಾದ ರಸ್ತೆ ಆ ಗ್ರಾಮಕ್ಕೆ ಇಲ್ಲ. ಹೊರಜಗತ್ತಿನೊಂದಿಗೆ ಸಂಪರ್ಕವನ್ನೇ ಗ್ರಾಮ ಕಳೆದುಕೊಂಡಿದೆ. ಮೂಲಸೌಕರ್ಯ ಕೊರತೆ ಇತ್ತು. ಈ ಎಲ್ಲ ವಿಚಾರಗಳನ್ನು ಸುದೀಪ್‌ಗೆ ತಿಳಿಸಿದಾಗ ಗ್ರಾಮವನ್ನೇ ದತ್ತು ಪಡೆದು ಸರ್ವಾಂಗೀಣ ಅಭಿವೃದ್ಧಿ ಮಾಡುವ ಬಗ್ಗೆ ಅವರು ಒಲವು ತೋರಿದರು’ ಎಂದು ಕಿಚ್ಚ ಸುದೀಪ್‌ ಚಾರಿಟೆಬಲ್‌ ಸೊಸೈಟಿಯ ಅಧ್ಯಕ್ಷ ರಮೇಶ್‌ ಕಿಟ್ಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಜಿಲ್ಲಾಡಳಿತ, ಸ್ಥಳೀಯ ಶಾಸಕರ ಒಪ್ಪಿಗೆ ಪಡೆದು ಪ್ರಕೃತಿ ರಮಣೀಯವಾದ ಈ ಗ್ರಾಮವನ್ನೇ ದತ್ತು ತೆಗೆದುಕೊಂಡೆವು. ಸೊಸೈಟಿ ಮೂಲಕ ಈ ಹಿಂದೆ ಶಾಲೆಗಳನ್ನು ದತ್ತು ಪಡೆದಿದ್ದೆವು. ಆದರೆ, ಇದೇ ಮೊದಲ ಬಾರಿಗೆ ಗ್ರಾಮವೊಂದನ್ನು ದತ್ತು ಪಡೆದು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

ಮೊದಲು ಶಾಲೆ, ರಸ್ತೆ ಅಭಿವೃದ್ಧಿ: ‘ಗ್ರಾಮದಲ್ಲಿ ಇತರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೊದಲು ಶಾಲೆಯ ಅಭಿವೃದ್ಧಿ ಹಾಗೂ ಶಾಲೆಗೆ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿ ನಮ್ಮ ಆದ್ಯತೆ. ಶಾಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಇ–ಬೋರ್ಡ್‌ ಮತ್ತಿತರ ಸೌಲಭ್ಯ, ಪಕ್ಕಾ ರಸ್ತೆ ಹಾಗೂ ಮಕ್ಕಳಿಗೆ ಅನುಕೂಲವಾಗುವಂತೆ ವಾಹನದ ವ್ಯವಸ್ಥೆಯನ್ನು ಒಂದು ವರ್ಷದೊಳಗೆ ಮಾಡುವ ಗುರಿ ಇದೆ. ಜೊತೆಗೆ ಗ್ರಾಮದಲ್ಲಿ ಒಂದು ಆಸ್ಪತ್ರೆ, ನೀರಿನ ಟ್ಯಾಂಕ್‌ ನಿರ್ಮಿಸುತ್ತೇವೆ’ ಎಂದರು.

ಸ್ಯಾನಿಟರಿ ಪ್ಯಾಡ್‌ ತಯಾರಿಕೆ
‘ಮೇಕ್‌ ಇನ್‌ ಇಂಡಿಯಾ, ಆತ್ಮನಿರ್ಭರ್‌ ಭಾರತ್‌ ಯೋಜನೆಯಡಿ ಕೇರಳ ಮಾದರಿಯಲ್ಲಿ ಬಾಳೆದಿಂಡಿನ ನಾರಿನಿಂದ ಸ್ಯಾನಿಟರಿ ಪ್ಯಾಡ್‌ ತಯಾರಿಸಲು ಹಾಗೂ ಹೊಲಿಗೆ ತರಬೇತಿಯನ್ನು ಗ್ರಾಮದ ಮಹಿಳೆಯರಿಗೆ ನೀಡಲಿದ್ದೇವೆ. ಇದಕ್ಕೆ ಎನ್‌ಜಿಒಗಳ ಜೊತೆ ಮಾತುಕತೆ ನಡೆಸಿದ್ದೇವೆ. ಇಲ್ಲಿ ತಯಾರಿಸಲಾದ ಸ್ಯಾನಿಟರಿ ಪ್ಯಾಡ್‌ಗಳನ್ನು ಕರ್ನಾಟಕದಲ್ಲಿರುವ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಉಚಿತವಾಗಿ ನೀಡುವ ಚಿಂತನೆ ಇದೆ. ಮುಂದೆ ಇದರ ಮಾರಾಟಕ್ಕೂ ನಾವು ಕೈಜೋಡಿಸುತ್ತೇವೆ’ ಎಂದುರಮೇಶ್‌ ಕಿಟ್ಟಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.