ADVERTISEMENT

Farmers Protest | ರೈತ ಹೋರಾಟಕ್ಕೆ ವರ್ಷ ರಾಜ್ಯದ ವಿವಿಧೆಡೆ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 19:59 IST
Last Updated 26 ನವೆಂಬರ್ 2021, 19:59 IST
ರೈತ ಹೋರಾಟಕ್ಕೆ ವರ್ಷ ರಾಜ್ಯದ ವಿವಿಧೆಡೆ ರಸ್ತೆ ತಡೆ
ರೈತ ಹೋರಾಟಕ್ಕೆ ವರ್ಷ ರಾಜ್ಯದ ವಿವಿಧೆಡೆ ರಸ್ತೆ ತಡೆ   

ಬೆಂಗಳೂರು: ಕೇಂದ್ರ ಸರ್ಕಾರ ಜಾರಿ ಮಾಡಿದ್ದಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ಆರಂಭಿಸಿದ ಹೋರಾಟಕ್ಕೆ ಒಂದು ವರ್ಷ ತುಂಬಿದ ನೆನಪಿಗಾಗಿ ರಾಜ್ಯದ ವಿವಿಧ ಜಿಲ್ಲೆಗಳ ರೈತರು ಮತ್ತು ಪ್ರಗತಿಪರ ಸಂಘಟನೆಗಳು ಶುಕ್ರವಾರ ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಮಗಳೂರು, ಮಂಡ್ಯ, ಚಿಕ್ಕಬಳ್ಳಾಪುರ, ಹೊಸಪೇಟೆ, ತುಮಕೂರು, ಚಿತ್ರದುರ್ಗ, ವಿಜಯನಗರ, ಹುಬ್ಬಳ್ಳಿ ಸೇರಿ ಹಲವು ಜಿಲ್ಲಾ ಕೇಂದ್ರಗಳಲ್ಲಿ ರೈತರು ಹೆದ್ದಾರಿಗಳನ್ನು ತಡೆದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಕಾರ್ಪೊರೇಟ್‌ ಕಂಪನಿ ಪರ ನೀತಿ ಅನುಸರಿಸುತ್ತಿವೆ. ಕೃಷಿ ವಲಯಕ್ಕೆ ಕಾರ್ಪೊರೇಟ್ ಕಂಪನಿಗಳು ಬೇಡವೇ ಬೇಡ. ಕನಿಷ್ಠ ಬೆಂಬಲ ಬೆಲೆಯನ್ನು ಶಾಸನಬದ್ದಗೊಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ADVERTISEMENT

ಹೋರಾಟದಲ್ಲಿ ಹುತಾತ್ಮರಾದ ರೈತ ಕುಟುಂಬಗಳಿಗೆ ತಲಾ ₹50 ಲಕ್ಷ ಪರಿಹಾರ ಮತ್ತು ರೈತರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆಯಬೇಕು. ರಾಜ್ಯ ಸರ್ಕಾರ ರೂಪಿಸಿದ ಭೂಸ್ವಾಧೀನ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕುಎಂದೂ ಒತ್ತಾಯಿಸಿದರು.

8 ಗಂಟೆ ಹೆದ್ದಾರಿ ತಡೆ:
ಚಿಕ್ಕಬಳ್ಳಾಪುರದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಚದಲಪುರ ರಾಷ್ಟ್ರೀಯ ಹೆದ್ದಾರಿ ತಡೆ ನಡೆಯಿತು. ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳ ಪ್ರಗತಿ‍‍ಪರ ಸಂಘಟನೆಗಳ ಸದಸ್ಯರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕಿರಂಗೂರು ಬಳಿ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು 8 ಗಂಟೆಗಳ ಬಂದ್‌ ಮಾಡಿದರು. ಹೆದ್ದಾರಿಯಲ್ಲಿ ಎತ್ತಿನ ಗಾಡಿ
ಗಳು, ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ, ರಸ್ತೆಯಲ್ಲೇ ಜಾನುವಾರುಗಳನ್ನೂ ಕಟ್ಟಿ ಹಾಕಿದರು.

ಹುಬ್ಬಳ್ಳಿಯಲ್ಲಿ ಕಳಸಾ– ಬಂಡೂರಿ ರೈತ ಹೋರಾಟ ಸಮಿತಿ ಸದಸ್ಯರು ಸ್ವಾಮಿನಾಥನ್‌ ವರದಿ ಜಾರಿ ಮತ್ತು ಕಳಸಾ ಬಂಡೂರಿ ಕಾಮಗಾರಿಯನ್ನು ತಕ್ಷಣವೇ ಆರಂಭಿಸಬೇಕು ಎಂದು ನಗರದ ಗಬ್ಬೂರು ಬೈಪಾಸ್‌ ಮತ್ತು ಬೆಂಗಳೂರು– ಪೂನಾ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಧರಣಿ ನಡೆಸಿದರು.

ಕೋಲಾರದಲ್ಲಿ ರೈತ ಸಂಘದ ಕಾರ್ಯಕರ್ತರು ಎತ್ತಿನ ಬಂಡಿ, ನೇಗಿಲುಗಳು, ಕೋಳಿಗಳು ಮತ್ತು ಬೆಳೆಗಳ ಸಮೇತ ಕೋಲಾರ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಿದರು.

ರೈತರ ಆಂದೋಲನ ಬೆಂಬಲಿಸಿ ಬೆಂಗಳೂರಿನಿಂದ ಯುವಕರ ತಂಡ ಶ್ರೀರಂಗಪಟ್ಟಣದವರೆಗೆ ಬೈಕ್‌ ಜಾಥಾ ನಡೆಸಿತು.

‘ಕೇಂದ್ರದ ನಡೆ ನೋಡಿ ತೀರ್ಮಾನ’

ಚಿತ್ರದುರ್ಗ: ‘ಕೃಷಿ ಕಾಯ್ದೆಗಳ ಬಗ್ಗೆ ಲೋಕಸಭೆಯ ಅಧಿವೇಶನದಲ್ಲಿ ನಡೆಯುವ ಚರ್ಚೆಯ ಆಧಾರದ ಮೇರೆಗೆ ರಾಜ್ಯದ ಕಾಯ್ದೆಗಳ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಎಪಿಎಂಸಿ ಕಾಯ್ದೆ ಹಾಗೂ ಇತರ ಕಾಯ್ದೆಗಳ ಮಧ್ಯೆ ವ್ಯತ್ಯಾಸವಿದೆ. ಕೇಂದ್ರದ ನಡೆಯನ್ನು ನೋಡಿಕೊಂಡು ನಿರ್ಧಾರ ಕೈಗೊಳ್ಳಲಾಗುವುದು’ ಎಂದಷ್ಟೇ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.