
ವೀರೇಂದ್ರ ಪಪ್ಪಿ
ಬೆಂಗಳೂರು: ಆನ್‌ಲೈನ್ ಬೆಟ್ಟಿಂಗ್ ಹಾಗೂ ಜೂಜಾಟ ಪ್ರಕರಣದ ಪ್ರಮುಖ ಆರೋಪಿ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಯೊಂದಿಗೆ ಅಕ್ರಮದಲ್ಲಿ ಶಾಮೀಲಾದ ಆರೋಪದಡಿ ಇತರೆ ವ್ಯಕ್ತಿಗಳು, ಸಂಸ್ಥೆಗಳ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಹೆಚ್ಚುವರಿ ದೋಷಾರೋಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.
ಪೃಥ್ವಿ ಎನ್.ರಾಜ್, ಕೆ.ಸಿ.ತಿಪ್ಪೇಸ್ವಾಮಿ, ಫೋನ್‌ಪೈಸಾ ಪೇಮೆಂಟ್ ಸಲ್ಯೂಷನ್ಸ್ ಪ್ರೈ.ಲಿ ಹಾಗೂ ಲಾಜಿಕ್‌ಫೋರ್ಜ್ ಸಲ್ಯೂಷನ್ಸ್ ಪ್ರೈ.ಲಿ. ಸೇರಿದಂತೆ ಹಲವು ವ್ಯಕ್ತಿಗಳು ಮತ್ತು ಸಂಸ್ಥೆಗಳ ಹೆಸರನ್ನು ದೋಷಾರೋಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಬೆಟ್ಟಿಂಗ್ ಜಾಲತಾಣಗಳಾದ ಕಿಂಗ್ 567, ಪ್ಲೇ 567 ಹಾಗೂ ಪ್ಲೇ ವಿನ್ 567 ಬೆಟ್ಟಿಂಗ್‌ನಲ್ಲಿ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿಕೊಂಡು ವ್ಯವಸ್ಥಿತವಾಗಿ ವಂಚನೆ ಎಸಗಿದ ಆರೋಪದಡಿ ಕಳೆದ ಆಗಸ್ಟ್‌ನಲ್ಲಿ ವೀರೇಂದ್ರ ಪಪ್ಪಿ ನಿವಾಸ ಸೇರಿ ಸಹಚರರ ವಿರುದ್ಧ ದೇಶದೆಲ್ಲೆಡೆ ಸುಮಾರು 60 ಕಡೆಗಳಲ್ಲಿ ಇ.ಡಿ ದಾಳಿ ನಡೆಸಿತ್ತು.
ಈ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ನಗದು, ಚಿನ್ನದ ಗಟ್ಟಿ ಹಾಗೂ ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಿಕೊಂಡಿತ್ತು. ತನಿಖೆ ಬಳಿಕ ಶಾಸಕ ವೀರೇಂದ್ರ ಅವರನ್ನು ಬಂಧಿಸಿ, ಅವರಿಗೆ ಸೇರಿದ ಅಂದಾಜು ₹177.30 ಕೋಟಿ ಸ್ಥಿರ ಹಾಗೂ ಚರಾಸ್ತಿಯನ್ನು ಇ.ಡಿ ಮುಟ್ಟುಗೋಲು ಹಾಕಿಕೊಂಡಿತ್ತು.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಬೆಟ್ಟಿಂಗ್ ಆ್ಯಪ್‌ಗಳಲ್ಲಿ ಎದುರಾಳಿ ಸ್ಪರ್ಧಿ ಇರುವುದಾಗಿ ಬಿಂಬಿಸಿಕೊಂಡು ಸಾರ್ವಜನಿಕರಿಂದ ಬೆಟ್ಟಿಂಗ್ ಹಣ ಕಟ್ಟಿಸಿಕೊಂಡು ವಂಚಿಸುತ್ತಿದ್ದರು. ಹಣ ವರ್ಗಾಯಿಸಲು ವಿವಿಧ ಪೇಮೆಂಟ್ ಗೇಟ್‌ವೇ ಕಂಪನಿಗಳ ಮ್ಯೂಲ್ (ನಕಲಿ) ಖಾತೆಗಳನ್ನು ಬಳಸಿಕೊಂಡಿದ್ದವು ಎಂದು ಜಾರಿ ನಿರ್ದೇಶನಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.