ADVERTISEMENT

ಆನ್‌ಲೈನ್‌ ಶಿಕ್ಷಣ ಹೊರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು: ಸಚಿವ ಸುರೇಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 12:38 IST
Last Updated 29 ಜೂನ್ 2020, 12:38 IST
ಸಚಿವ ಸುರೇಶ್ ಕುಮಾರ್
ಸಚಿವ ಸುರೇಶ್ ಕುಮಾರ್   

ಕೋಲಾರ: ‘ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮಕ್ಕಳಿಗೆ ಹೊರೆಯಾಗದೆ ಖುಷಿ ನೀಡುವ ರೀತಿಯಲ್ಲಿ ಆನ್‌ಲೈನ್‌ ಶಿಕ್ಷಣ ನೀಡಬೇಕು. ಈ ವಿಚಾರದಲ್ಲಿ ಗ್ರಾಮೀಣ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಸ್ಪಷ್ಟಪಡಿಸಿದರು.

ತಾಲ್ಲೂಕಿನ ವೇಮಗಲ್‌ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಇಂಡಿಯಾದಷ್ಟೇ ಭಾರತವೂ ಮುಖ್ಯ. ಗ್ರಾಮೀಣ ಮಕ್ಕಳು ಆನ್‌ಲೈನ್‌ ತಂತ್ರಜ್ಞಾನದಿಂದ ವಂಚಿತರಾಗುತ್ತಾರೆ ಎಂಬ ಆತಂಕ ಬೇಡ. ವಿಶೇಷವಾಗಿ ಗ್ರಾಮೀಣ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ನಿರ್ಧಾರ ಮಾಡುತ್ತೇವೆ’ ಎಂದು ತಿಳಿಸಿದರು.

‘ತಜ್ಞರ ಸಮಿತಿ ಸೂಚನೆಯಂತೆ ಸರ್ಕಾರಿ ಶಾಲಾ ಮಕ್ಕಳ ಪೈಕಿ ಎಷ್ಟು ಮಂದಿಯ ಮನೆಗಳಲ್ಲಿ ರೇಡಿಯೊ, ಟಿ.ವಿ. ಸ್ಮಾರ್ಟ್‌ಫೋನ್, ಇಂಟರ್‌ನೆಟ್‌ ಸೌಲಭ್ಯವಿದೆ ಎಂಬ ಮಾಹಿತಿ ಸಂಗ್ರಹಿಸಲಾಗಿದೆ. ಆನ್‌ಲೈನ್ ಶಿಕ್ಷಣ ಬದಲಿ ಶಿಕ್ಷಣವಾಗಲು ಸಾಧ್ಯವಿಲ್ಲ. ಪೂರಕ ಶಿಕ್ಷಣವಷ್ಟೇ. ಶೇ 90ರಷ್ಟು ಮಂದಿಗೆ ಆನ್‌ಲೈನ್ ಶಿಕ್ಷಣ ತಲುಪಿಸಬಹುದು. ಉಳಿದ ಶೇ 10ರಷ್ಟು ಮಕ್ಕಳ ಪಾಡೇನು ಎಂಬ ಆಲೋಚನೆಯೂ ಇದೆ’ ಎಂದರು.

ADVERTISEMENT

‘ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಆನ್‌ಲೈನ್‌ ಶಿಕ್ಷಣದ ಮಾರ್ಗಸೂಚಿ ಹೊರಡಿಸಿದೆ. ಆನ್‌ಲೈನ್‌ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಪೋಷಕರ ಜತೆಗೆ ವಾರಕ್ಕೊಮ್ಮೆ ಸಂವಾದ ನಡೆಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸ್ಪಂದಿಸುವ ಕೆಲಸ ಮಾಡುತ್ತಾರೆ’ ಎಂದು ವಿವರಿಸಿದರು.

‘ಆನ್‌ಲೈನ್‌ ಶಿಕ್ಷಣದಿಂದ ಸರ್ಕಾರಿ ಶಾಲಾ ಮಕ್ಕಳು ವಂಚನೆ ಆಗಬಾರದೆಂದು ತಜ್ಞರು ಚರ್ಚೆ ಮಾಡುತ್ತಿದ್ದಾರೆ. ಜತೆಗೆ ಹೈಕೋರ್ಟ್‌ನಲ್ಲೂ ಚರ್ಚೆ ಆಗುತ್ತಿದೆ. ಸರ್ಕಾರಿ ಶಾಲೆಗಳ ಋಣ ನನ್ನ ಮೇಲಿದೆ. ನಾನು ಯಾರ ಲಾಬಿಗೂ ಮಣಿಯುವುದಿಲ್ಲ. ನನ್ನದು ಮಕ್ಕಳ ಲಾಬಿಯಷ್ಟೇ. ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದರೆ ಸಚಿವ ಸ್ಥಾನದಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.