ನವದೆಹಲಿ: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸಹಕಾರ ನೀಡುವಂತೆ ಇಂಡಿಯಾ ಮೈತ್ರಿಕೂಟದ ಡಿಎಂಕೆಯ ಮನವೊಲಿಸುವ ಸಾಧ್ಯತೆಯನ್ನು ತಳ್ಳಿ ಹಾಕಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಡಿಎಂಕೆಯೊಂದಿಗೆ ನಮ್ಮದು ರಾಜಕೀಯ ಉದ್ದೇಶದ ಮೈತ್ರಿ ಅಷ್ಟೇ’ ಎಂದು ಸ್ಪಷ್ಟಪಡಿಸಿದರು.
ಶುಕ್ರವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಒಟ್ಟಿಗೆ ಕೆಲಸ ಮಾಡುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ’ ಎಂದರು. ‘ಅವರ ರಾಜಕಾರಣ ಅವರು ಮಾಡುತ್ತಾರೆ. ನಮ್ಮ ರಾಜಕಾರಣ ನಾವು ಮಾಡುತ್ತೇವೆ’ ಎಂದು ತಿಳಿಸಿದರು.
‘ಮೇಕೆದಾಟು ವಿಚಾರದಲ್ಲಿ 15 ದಿನಗಳಲ್ಲಿ ಕರ್ನಾಟಕದ ವಾದ ಆಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ, ದಿನಾಂಕ ನಿಗದಿ ಮಾಡಿಲ್ಲ. ತಮಿಳುನಾಡಿನವರು ರಾಜಕೀಯವಾಗಿ ಸಹಕಾರ ನೀಡುವುದಿಲ್ಲ ಎಂಬುದು ಗೊತ್ತಿದೆ. ಅವರು ಸಣ್ಣಪುಟ್ಟ ಅಣೆಕಟ್ಟುಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ನಾವು ತೊಂದರೆ ಕೊಡುವುದಿಲ್ಲ. ಈ ವಿಚಾರವನ್ನೂ ಸಚಿವರ ಗಮನಕ್ಕೆ ತರಲಾಗಿದೆ’ ಎಂದರು.
‘ಆಲಮಟ್ಟಿ ಅಣೆಕಟ್ಟು ಎತ್ತರ ಮಾಡಲು ಗೆಜೆಟ್ ಅಧಿಸೂಚನೆ ಹೊರಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕೇಂದ್ರ ಜಲಶಕ್ತಿ ಸಚಿವರು ಕೃಷ್ಣಾ ನದಿ ಜಲಾನಯನ ಪ್ರದೇಶದ ರಾಜ್ಯಗಳ ಪ್ರತಿನಿಧಿಗಳನ್ನು ಕರೆಸಿ ಅಣೆಕಟ್ಟು ಎತ್ತರ ಹೆಚ್ಚಳದ ಬಗ್ಗೆ ಮುಂದಿನ 15 ದಿನಗಳಲ್ಲಿ ಸಭೆ ನಡೆಸಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.
‘ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ಮತ್ತು ನಮಗೆ ಎಷ್ಟು ನೀರು ಸಿಗಬೇಕು ಹಾಗೂ ಅಣೆಕಟ್ಟು ಎಷ್ಟು ಎತ್ತರ ಮಾಡಬೇಕು ಎಂದು ಹಿಂದೆಯೇ ತೀರ್ಮಾನವಾಗಿದೆ. 524 ಅಡಿ ಎತ್ತರಕ್ಕೆ ಎಷ್ಟು ಭೂಮಿ ಬೇಕಾಗಬಹುದು ಎಂದು ಅಂದಾಜಿಸಿ ಭೂಸ್ವಾಧೀನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.