ADVERTISEMENT

ಆಂಧ್ರದಲ್ಲಿ ಕನ್ನಡ ಶಾಲೆ ತೆರೆಯಿರಿ: ತೆಲುಗು ವಿಜ್ಞಾನ ಸಮಿತಿ ಮನವಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 14:36 IST
Last Updated 6 ಏಪ್ರಿಲ್ 2025, 14:36 IST
<div class="paragraphs"><p>ಕಾರ್ಯಕ್ರಮದಲ್ಲಿ, ನಟ ಜಗ್ಗೇಶ್ ಅವರಿಗೆ ‘ಶ್ರೀ ಕೃಷ್ಣದೇವರಾಯ ‍ಪುರಸ್ಕಾರ’ ಮತ್ತು ನಟ ಸಾಯಿಕುಮಾರ್ ಅವರಿಗೆ ‘ಸ್ವರ್ಣೋತ್ಸವ ಸತ್ಕಾರ’ ನೀಡಿ ಗೌರವಿಸಲಾಯಿತು.&nbsp;ಕೆ. ರಘುರಾಮ ಕೃಷ್ಣರಾಜು,&nbsp;ರಾಧಾಕೃಷ್ಣರಾಜು ಮತ್ತು&nbsp;ಕೆ. ಶ್ಯಾಮರಾಜು ಉಪಸ್ಥಿತರಿದ್ದರು &nbsp;</p></div>

ಕಾರ್ಯಕ್ರಮದಲ್ಲಿ, ನಟ ಜಗ್ಗೇಶ್ ಅವರಿಗೆ ‘ಶ್ರೀ ಕೃಷ್ಣದೇವರಾಯ ‍ಪುರಸ್ಕಾರ’ ಮತ್ತು ನಟ ಸಾಯಿಕುಮಾರ್ ಅವರಿಗೆ ‘ಸ್ವರ್ಣೋತ್ಸವ ಸತ್ಕಾರ’ ನೀಡಿ ಗೌರವಿಸಲಾಯಿತು. ಕೆ. ರಘುರಾಮ ಕೃಷ್ಣರಾಜು, ರಾಧಾಕೃಷ್ಣರಾಜು ಮತ್ತು ಕೆ. ಶ್ಯಾಮರಾಜು ಉಪಸ್ಥಿತರಿದ್ದರು  

   

–ಪ್ರಜಾವಾಣಿ ವಾರ್ತೆ

ಬೆಂಗಳೂರು: ‘ಆಂಧ್ರದ ಹಲವು ಜಿಲ್ಲೆಗಳು ಕರ್ನಾಟಕದ ಜತೆಗೆ ಗಡಿ ಹಂಚಿಕೊಂಡಿವೆ. ಅಲ್ಲೆಲ್ಲಾ ಕನ್ನಡಿಗರು ಬಹಳ ಸಂಖ್ಯೆಯಲ್ಲಿದ್ದಾರೆ. ಆದರೆ ಅವರಿಗೆ ಕನ್ನಡ ಶಾಲೆ ಇಲ್ಲ. ಆಂಧ್ರ ಪ್ರದೇಶ ಸರ್ಕಾರದಿಂದ ಕನ್ನಡ ಶಾಲೆ ತೆರೆಯಬೇಕು’ ಎಂದು ತೆಲುಗು ವಿಜ್ಞಾನ ಸಮಿತಿ ಅಧ್ಯಕ್ಷ ಎ.ರಾಧಾಕೃಷ್ಣ ರಾಜು ಒತ್ತಾಯಿಸಿದರು.

ADVERTISEMENT

ತೆಲುಗು ವಿಜ್ಞಾನ ಸಮಿತಿ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಯುಗಾದಿ ಉತ್ಸವ ಮತ್ತು ಶ್ರೀ ಕೃಷ್ಣದೇವರಾಯ ಪುಸ್ಕಾರ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಆಂಧ್ರ ಪ್ರದೇಶ ವಿಧಾನಸಭೆಯ ಉಪ ಸಭಾಧ್ಯಕ್ಷ ಕೆ.ರಘುರಾಮ ಕೃಷ್ಣರಾಜು ಅವರಿಗೆ ಮನವಿ ಸಲ್ಲಿಸಿದ ಅವರು, ‘ಕನ್ನಡ ಮತ್ತು ತೆಲುಗು ಅಣ್ಣ–ತಮ್ಮಂದಿರಂತಿವೆ. ಎರಡೂ ಭಾಷಿಕ ಸಮುದಾಯಗಳ ಜನರ ನಡೆ, ನುಡಿ ಮತ್ತು ಲಿಪಿಯಲ್ಲಿ ಬಹಳ ಸಾಮ್ಯತೆ ಇದೆ. ಕನ್ನಡ ಮತ್ತು ತೆಲುಗು ಲಿಪಿ ಮಧ್ಯೆ ಏಳು ಅಕ್ಷರಗಳ ವ್ಯತ್ಯಾಸವಷ್ಟೇ ಇದೆ’ ಎಂದರು.

‘ಎರಡೂ ಭಾಷೆಗಳ ನಡುವಣ ಈ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಇಲ್ಲಿ ತೆಲುಗು ಕಲಿಕೆ ಮತ್ತು ಆಂಧ್ರದ ನೆಲದಲ್ಲಿ ಕನ್ನಡ ಕಲಿಕೆ ಮಹತ್ವದ ಪಾತ್ರ ವಹಿಸುತ್ತದೆ. ಈ ವಿಚಾರವನ್ನು ಆಂಧ್ರ ಪ್ರದೇಶ ಸರ್ಕಾರದ ಗಮನಕ್ಕೆ ತಂದು, ಅಲ್ಲಿನ ನೆಲದಲ್ಲಿ ಕನ್ನಡ ಶಾಲೆಗಳಿಗೆ ಶಿಕ್ಷಕರು, ಪಠ್ಯಪುಸ್ತಕ ಮತ್ತಿತರ ಸವಲತ್ತುಗಳನ್ನು ಒದಗಿಸಬೇಕು’ ಎಂದು ಕೋರಿದರು.

ರಘುರಾಮ ಕೃಷ್ಣರಾಜು, ‘ಈ ಮನವಿಯನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಗಡಿ ಜಿಲ್ಲೆಗಳಲ್ಲಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.

ನಟ ಜಗ್ಗೇಶ್‌, ‘ಎರಡೂ ಭಾಷೆಗಳ ಜನರು ಅನ್ಯೋನ್ಯವಾಗಿ ಇರುವುದರಿಂದಲೇ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಮಧ್ಯೆ ಯಾವುದೇ ಸಂಘರ್ಷವಿಲ್ಲ. ಇದನ್ನು ಕಾಪಾಡಿಕೊಳ್ಳಬೇಕು’ ಎಂದರು.

‘ಜಗ್ಗೇಶ್‌ ಖಾನ್‌ ಆಗಿರುತ್ತಿದ್ದೆ’

‘ಭಾರತೀಯರೆಲ್ಲರೂ ಕೃಷ್ಣದೇವರಾಯ ಮತ್ತು ಶಿವಾಜಿ ಮಹಾರಾಜರಿಗೆ ಕೃತಜ್ಞರಾಗಿ ಇರಬೇಕು. ಆ ಇಬ್ಬರು ಈ ನಾಡಿನಲ್ಲಿ ಹುಟ್ಟದೇ ಇದ್ದಿದ್ದರೆ ನಮ್ಮೆಲ್ಲರ ಹೆಸರು ಬೇರೆಯಾಗಿರುತ್ತಿತ್ತು. ನಾನು ಜಗ್ಗೇಶ್‌ ಅಲ್ಲ ಜಗ್ಗೇಶ್‌ ಖಾನ್‌ ಆಗಿರುತ್ತಿದ್ದೆ’ ಎಂದು ರಾಜ್ಯಸಭಾ ಸದಸ್ಯ ಜಗ್ಗೇಶ್‌ ಹೇಳಿದರು. ತೆಲುಗು ವಿಜ್ಞಾನ ಸಮಿತಿ ಕೊಡಮಾಡುವ ‘ಶ್ರೀ ಕೃಷ್ಣದೇವರಾಯ ಪುರಸ್ಕಾರ’ ಸ್ವೀಕರಿಸಿ ಅವರು ಮಾತನಾಡಿದರು. ‘ನಾನು ಆರ್‌ಎಸ್‌ಎಸ್‌ನಿಂದ ಬಂದವನು. ಸೇವೆ ಮಾಡುವುದನ್ನೇ ಸಂಘ ನಮಗೆ ಹೇಳಿಕೊಟ್ಟಿದೆ. ನಮ್ಮತನವನ್ನು ಕಾಪಾಡಿದಂತಹ ಕೃಷ್ಣದೇವರಾಯರ ಹೆಸರಿನ ಪ್ರಶಸ್ತಿ ಸ್ವೀಕರಿಸುತ್ತಿರುವುದು ಜಾಗತಿಕ ಮಟ್ಟದ ಮನ್ನಣೆ ದೊರೆತಷ್ಟು ಸಂತಸ ತಂದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.