ADVERTISEMENT

ಮತ್ತೊಂದು ಸುತ್ತಿನ ಆಪರೇಷನ್ ಕಮಲಕ್ಕೆ ಸಿದ್ಧತೆ?

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 19:33 IST
Last Updated 5 ಸೆಪ್ಟೆಂಬರ್ 2019, 19:33 IST
   

ಬೆಂಗಳೂರು: ಮೊದಲ ಕಂತಿನ ‘ಆಪರೇಷನ್‌ ಕಮಲ’ದ ಮೂಲಕ ‘ದೋಸ್ತಿ’ ಸರ್ಕಾರ ಪತನಗೊಳಿಸಿ ಗದ್ದುಗೆ ಏರಿದ ಬಿಜೆಪಿ, ಇನ್ನೊಂದು ಸುತ್ತಿನ ‘ಆಪರೇಷನ್‌’ಗೆ ಸಿದ್ಧವಾಗಿದೆ. ಈ ಬಾರಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಡಜನ್‌ಗೂ ಹೆಚ್ಚು ಶಾಸಕರನ್ನು ಸೆಳೆಯುವ ಸಿದ್ಧತೆ ನಡೆಸಿದೆ.

ಬಹುತೇಕ ದಸರಾ ಕಳೆದ ಬಳಿಕ ಈ ‘ಆಪರೇಷನ್‌’ ನಡೆಯಲಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನಲ್ಲಿ ಆಯಾ ಪಕ್ಷಗಳ ಮುಖಂಡರ ವಿರುದ್ಧ ಅಸಮಾಧಾನಗೊಂಡಿರುವ ಶಾಸಕರಿಗೆ ಬಿಜೆಪಿ ಬಲೆ ಬೀಸಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯು ಜೆಡಿಎಸ್‌ ಶಾಸಕರಾದ ಜಿ.ಟಿ.ದೇವೇಗೌಡ, ರವೀಂದ್ರ ಶ್ರೀಕಂಠಯ್ಯ, ಸುರೇಶ್‌ಗೌಡ, ಡಿ.ಸಿ.ಗೌರಿಶಂಕರ್‌ ಮತ್ತು ನಾಗನಗೌಡ ಕಂದಕೂರ ಅವರನ್ನು ಸೆಳೆಯಲು ಮುಂದಾಗಿದೆ. ಜೆಡಿಎಸ್‌ ಹಾಲಿ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಅವರ ಹೆಸರೂ ಕೇಳಿಬಂದಿದೆ. ಕಾಂಗ್ರೆಸ್‌ ಶಾಸಕರಾದ ಬಿ.ನಾಗೇಂದ್ರ, ಭೀಮಾನಾಯ್ಕ್‌ ಅವರನ್ನೂ ಸೆಳೆಯಲಾಗುತ್ತಿದೆ. ಈಗಾಗಲೇ ಬಿಜೆಪಿ ಪರ ವಾಲಿರುವ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಅವರು, ದಾಸರಹಳ್ಳಿ ಜೆಡಿಎಸ್‌ ಶಾಸಕ ಆರ್‌.ಮಂಜುನಾಥ್‌ ಅವರನ್ನೂ ಬಿಜೆಪಿಗೆ ಕರೆತರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ADVERTISEMENT

224 ಶಾಸಕರ ಪೈಕಿ ಕಾಂಗ್ರೆಸ್, ಜೆಡಿಎಸ್‌ನ 17 ಶಾಸಕರು ಅನರ್ಹರಾಗಿದ್ದು, ಇದರಿಂದಾಗಿವಿಧಾನಸಭೆಯಲ್ಲಿ ಒಟ್ಟು ಶಾಸಕರ ಬಲ 207ಕ್ಕೆ ಇಳಿದಿದೆ. ಜೆಡಿಎಸ್‌, ಕಾಂಗ್ರೆಸ್‌ನ ಇನ್ನಷ್ಟು ಶಾಸಕರನ್ನು ಸೆಳೆದರೆ, ಸರ್ಕಾರವನ್ನು ಸುಲಭದಲ್ಲಿ ಪತನಗೊಳಿಸಲು ಸಾಧ್ಯವಿಲ್ಲ ಎನ್ನುವುದು ಬಿಜೆಪಿ ಲೆಕ್ಕಾಚಾರ. ಹೊಸ ಬೆಳವಣಿಗೆಯಿಂದ ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಆತಂಕಕ್ಕೆ ಒಳಗಾಗಿದ್ದು, ಅಳಿದುಳಿದ ಶಾಸಕರನ್ನು ಹಿಡಿದಿಡಲು ಹರ ಸಾಹಸ ಮಾಡುತ್ತಿದ್ದಾರೆ.

ಜೆಡಿಎಸ್‌ನ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಈಗಾಗಲೇ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರನ್ನು ಹೊಗಳಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮೈಸೂರಿಗೆ ಭೇಟಿ ನೀಡಿದಾಗ, ಅವರಿಗೆ ಹೂವಿನ ಹಾರ ಹಾಕಿ ಸ್ವಾಗತಿಸಿದರು. ಎಚ್‌.ಡಿ.ಕುಮಾರಸ್ವಾಮಿಗೆ ಆಪ್ತರಾಗಿರುವ ಶಾಸಕ ಸಾ.ರಾ.ಮಹೇಶ್‌ ವಿರುದ್ಧವೂ ಪರೋಕ್ಷವಾಗಿ ಟೀಕಾ ಪ್ರಹಾರ ನಡೆಸಿದ್ದರು.

ಜೆಡಿಎಸ್ ಶಾಸಕರನ್ನು ಸೆಳೆಯುವ ಪ್ರಯತ್ನದ ಬಗ್ಗೆ ಜೆಡಿಎಸ್‌ ವಕ್ತಾರ ರಮೇಶ್‌ ಬಾಬು ಅವರನ್ನು ಸಂಪರ್ಕಿಸಿದಾಗ, ‘ಪಕ್ಷದಲ್ಲಿ ಯಾವುದೇ ಶಾಸಕರಿಗೂ ಅಸಮಾಧಾನವಿಲ್ಲ. ಬಿಜೆಪಿ ಅನಗತ್ಯವಾಗಿ ವದಂತಿ ಹಬ್ಬಿಸುತ್ತಿದೆ. ಅವರ ಪಕ್ಷದಲ್ಲೇ ಗುಂಪುಗಾರಿಕೆ ಹೆಚ್ಚಾಗಿದೆ. ಯಾವುದೇ ಶಾಸಕ ಪಕ್ಷ ತೊರೆಯುವುದಿಲ್ಲ’ ಎಂದರು.

ಅನರ್ಹ ಶಾಸಕರ ಅರ್ಜಿ ಇದೇ 11ಕ್ಕೆ ವಿಚಾರಣೆ

ನವದೆಹಲಿ: ಕರ್ನಾಟಕದ 17 ಅನರ್ಹ ಶಾಸಕರು ಸ್ಪೀಕರ್ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಇದೇ 11ರಂದು ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಗುರುವಾರ ನಿರ್ಧರಿಸಿದೆ. ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಅಜಯ್ ರಸ್ತೋಗಿ ಪೀಠದಲ್ಲಿ ವಿಚಾರಣೆ ನಿಗದಿಯಾಗಿದೆ.

ಶ್ರೀಮಂತ ಪಾಟೀಲ್, ರಮೇಶ ಜಾರಕಿಹೊಳಿ, ಕೆ. ಸುಧಾಕರ್, ಪ್ರತಾಪ್‌ ಗೌಡ ಪಾಟೀಲ್, ವಿಶ್ವನಾತ್, ಆರ್.ಶಂಕರ್, ಆನಂದ್ ಸಿಂಗ್, ಎಂಟಿಬಿ ನಾಗರಾಜ್, ರೋಷನ್ ಬೇಗ್ ಮತ್ತು ಇತರರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಈ ಹಿಂದೆ ನಿರಾಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.