ಬೆಂಗಳೂರು: ಇಸ್ರೇಲ್–ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಭಾರತ ಆರಂಭಿಸಿರುವ ಆಪರೇಷನ್ ಸಿಂಧು ಎಂಬ ರಕ್ಷಣಾ ಕಾರ್ಯಾಚರಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಅಲಿಪುರದ 51 ಜನರು ಮಂಗಳವಾರ ಬೆಳಿಗ್ಗೆ ಸುರಕ್ಷಿತವಾಗಿ ಬೆಂಗಳೂರಿಗೆ ಬಂದಿಳಿದರು.
ಕೇಂಪೇಗೌಡ ವಿಮಾನ ನಿಲ್ದಾಣದಲ್ಲಿ ಪಿಟಿಐ ಜೊತೆ ಮಾತನಾಡಿರುವ ಈ ತಂಡದ ಸದಸ್ಯರು, ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ವಿಶೇಷ ಕಾಳಜಿ ವಹಿಸಿ ನಮ್ಮನ್ನು ಸುರಕ್ಷಿತವಾಗಿ ಕರೆಯಿಸಿಕೊಂಡಿದ್ದಕ್ಕೆ ಧನ್ಯವಾದ ಹೇಳಿದರು.
ಇಸ್ರೇಲ್–ಇರಾನ್ ಯುದ್ಧ ಶುರುವಾದ ಮೇಲೆ ನಾವೆಲ್ಲ ತೀವ್ರ ಆತಂಕಗೊಂಡಿದ್ದೇವು. ಭಾರತ ಆರಂಭಿಸಿದ ಆಪರೇಷನ್ ಸಿಂಧು ಭಾಗವಾಗಿ ನಾವು ಇರಾನ್‌ನ ಸುರಕ್ಷಿತ ನೆಲೆಗಳ ಮೂಲಕ ತಾಯ್ನಾಡಿಗೆ ವಾಪಸ್ ಆಗಿದ್ದೇವೆ ಎಂದು ಆಸೀಫ್ ಎನ್ನುವರು ಹೇಳಿದ್ದಾರೆ.
ಮೊದಲ ಬ್ಯಾಚ್‌ನಲ್ಲಿ ಅಲಿಪುರದ 21 ಜನ ಈಗಾಗಲೇ ಬಂದು ತಮ್ಮ ತವರು ಸೇರಿಕೊಂಡಿದ್ದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ‘ಅಲಿಪುರ’ ಎಂಬ ಸಣ್ಣ ಹಳ್ಳಿಯಲ್ಲಿ ಶಿಯಾ ಪಂಗಡದ ಮುಸ್ಲಿಂ ಜನ ಹೆಚ್ಚಾಗಿ ನೆಲೆಸಿದ್ದಾರೆ. ಇವರು ಇರಾನ್ ಜೊತೆ ನಿಕಟ ಸಂಪರ್ಕ ಹೊಂದಿದ್ದು ಶಿಕ್ಷಣ, ಉದ್ಯೋಗ, ಧಾರ್ಮಿಕ ಅಧ್ಯಯನಕ್ಕೆ ಇರಾನ್ ಜೊತೆ ಹೆಚ್ಚು ಒಡನಾಟ ಹೊಂದಿದ್ದಾರೆ. ಅಲಿಪುರದ ನೂರಕ್ಕೂ ಅಧಿಕ ಜನ ಇರಾನ್‌ನ ರಾಜಧಾನಿ ಟೆಹರಾನ್‌ಗೆ ತೆರಳಿದ್ದರು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.