ADVERTISEMENT

Operation Sindoor | ಕ್ರೆಡಿಟ್‌ ಸೈನಿಕರಿಗೇ ಸಲ್ಲಬೇಕು: ಸಿದ್ದರಾಮಯ್ಯ

ಕದನ ವಿರಾಮ ಘೋಷಣೆಗೆ ಮುನ್ನ ಸರ್ವಪಕ್ಷಗಳ ಸಭೆ ಕರೆಯಬೇಕಿತ್ತು

​ಪ್ರಜಾವಾಣಿ ವಾರ್ತೆ
Published 13 ಮೇ 2025, 0:30 IST
Last Updated 13 ಮೇ 2025, 0:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಎಚ್‌.ಡಿ. ಕೋಟೆ (ಮೈಸೂರು ಜಿಲ್ಲೆ): ‘ಪಾಕಿಸ್ತಾನದ ವಿರುದ್ಧ ನಡೆಸಿದ ಕಾರ್ಯಾಚರಣೆಯ ಕ್ರೆಡಿಟ್ ಸೇನೆಯವರಿಗಷ್ಟೇ ಸಲ್ಲಬೇಕು. ಯಾವ ಪಕ್ಷವೂ ಅದನ್ನು ಕ್ಲೇಮ್ ಮಾಡಬಾರದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದಿದ್ದ ಯುದ್ಧಕ್ಕೂ- ಇವತ್ತಿನ ಸಂದರ್ಭಕ್ಕೂ ಹೋಲಿಸಿ  ಮಾತನಾಡುವುದಿಲ್ಲ. ಆಗಿನ ಪರಿಸ್ಥಿತಿಗಳೇ ಬೇರೆ, ಇವತ್ತಿನವೇ ಬೇರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮಾಡಿದ ‘ಎಕ್ಸ್‌’ ಬಗ್ಗೆಯಾಗಲೀ, ಪಾಕಿಸ್ತಾನದವರು ಮಾಡಿದ ಕದನ ವಿರಾಮ ಉಲ್ಲಂಘನೆಯ ಬಗ್ಗೆಯಾಗಲೀ ನಾನು ಮಾತನಾಡುವುದಿಲ್ಲ’ ಎಂದರು.

‘ಕದನ ವಿರಾಮ ಘೋಷಣೆಯಾಗಿದ್ದು, ಎರಡೂ ದೇಶಗಳವರು ಒಪ್ಪಿಕೊಂಡಿರುವುದನ್ನು ಸ್ವಾಗತಿಸುತ್ತೇನೆ. ಘೋಷಣೆಗೂ ಮುನ್ನ ಕೇಂದ್ರ ಸರ್ಕಾರವು ಸರ್ವಪಕ್ಷಗಳ ಸಭೆ ಹಾಗೂ ವಿಶೇಷ ಅಧಿವೇಶನವನ್ನೂ ಕರೆಯಬೇಕಿತ್ತು. ಗಂಭೀರ ವಿಷಯವಾಗಿದ್ದರಿಂದ, ಸರ್ವಪಕ್ಷ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಪ್ರಕಟಿಸಬಹುದಿತ್ತು’ ಎಂದರು.

ADVERTISEMENT

‘ರಾಜ್ಯದಲ್ಲಿರುವ ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ಹೊರಗೆ ಕಳುಹಿಸಿದ್ದು, ಮೈಸೂರಿನಲ್ಲಿ ಮೂವರು ಮಕ್ಕಳಷ್ಟೇ ಇದ್ದಾರೆ. ಅವರನ್ನು ಹೊರಗೆ ಕಳುಹಿಸಲು ತಾಂತ್ರಿಕ ಸಮಸ್ಯೆ ಇದೆ. ಗಂಡ ಪಾಕಿಸ್ತಾನಿ, ಹೆಂಡತಿ ಮೈಸೂರಿನವಳು. ಹೀಗಾಗಿ ಆರು ವರ್ಷದೊಳಗಿನವರಾದ ಮಕ್ಕಳ ವಿಚಾರದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.