ADVERTISEMENT

ಪ್ರಜಾವಾಣಿ ಸಂವಾದ: ಪ್ರತಿಪಕ್ಷ ನಾಯಕರು ಜಿಲ್ಲಾಧಿಕಾರಿಗಳ ಸಭೆಕರೆದು ಚರ್ಚಿಸಬಹುದೇ?

ಮಾಹಿತಿ ನೀಡದೆ ಬಚ್ಚಿಡುವ ಯತ್ನ: ಆರೋಪ

​ಪ್ರಜಾವಾಣಿ ವಾರ್ತೆ
Published 24 ಮೇ 2021, 20:04 IST
Last Updated 24 ಮೇ 2021, 20:04 IST
ಎಚ್‌.ಕೆ. ಪಾಟೀಲ, ಅಶ್ವತ್ಥನಾರಾಯಣ ಗೌಡ, ಪ್ರೊ.ರವಿವರ್ಮ ಕುಮಾರ್‌
ಎಚ್‌.ಕೆ. ಪಾಟೀಲ, ಅಶ್ವತ್ಥನಾರಾಯಣ ಗೌಡ, ಪ್ರೊ.ರವಿವರ್ಮ ಕುಮಾರ್‌   

ಬೆಂಗಳೂರು:‌ ‘ವಿರೋಧ ಪಕ್ಷದ ನಾಯಕ ಎಂದರೆ ಛಾಯಾ ಮುಖ್ಯಮಂತ್ರಿ. ಅವರಿಗೂ ಉತ್ತರದಾಯಿತ್ವವಿದೆ. ಮಾಹಿತಿ ಪಡೆಯಲು ಸಭೆ ನಡೆಸುವ ವಿಚಾರದಲ್ಲಿ ದ್ವೇಷ ಸಾಧನೆ ಸರಿಯಲ್ಲ.’ ಎಂದು ರಾಜ್ಯ ಸರ್ಕಾರವನ್ನು ಮಾಜಿ ಅಡ್ವೊಕೇಟ್‌ ಜನರಲ್ ರವಿವರ್ಮ ಕುಮಾರ್‌ ಪ್ರಶ್ನಿಸಿದರೆ, ‘ಮಾಹಿತಿ ಪಡೆಯಲು ಜಿಲ್ಲಾಧಿಕಾರಿಗಳ ಜೊತೆ ವಿರೋಧ ಪಕ್ಷದ ನಾಯಕ ಸಭೆ ಮಾಡಬಾರದು ಎನ್ನುವುದು ಪ್ರಜಾಪ್ರಭುತ್ವ ವಿರೋಧಿ ನಿಲುವು’ ಎಂದು ಕಾಂಗ್ರೆಸ್‌ ಶಾಸಕ ಎಚ್‌.ಕೆ. ಪಾಟೀಲ ಕಿಡಿಕಾರಿದರು.

‘ವಿರೋಧ ಪಕ್ಷದ ನಾಯಕರಾಗಿರುವವರು ಸರ್ಕಾರದ ಭಾಗವಲ್ಲ. ಜಿಲ್ಲಾಧಿಕಾರಿಗಳು ಅವರಿಗೆ ಉತ್ತರದಾಯಿ ಅಲ್ಲ. ಸಿದ್ದರಾಮಯ್ಯ ಪ್ರತಿಯೊಂದನ್ನೂ ಪ್ರಶ್ನಿಸುತ್ತಾ, ಟೀಕಿಸುತ್ತಾ ಹೋದರೆ ಹೇಗೆ?’ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಗೌಡ ತಿರುಗೇಟು ನೀಡಿದರು. ‘ಪ್ರತಿಪಕ್ಷ ನಾಯಕರು ಜಿಲ್ಲಾಧಿಕಾರಿಗಳ ಸಭೆ ಕರೆದು ಚರ್ಚಿಸಬಹುದೇ?’ ಎಂಬ ವಿಷಯದ ಕುರಿತು ‘ಪ್ರಜಾವಾಣಿ’ಯ ‘ಫೇಸ್‌ಬುಕ್‌’ ನೇರ ಸಂವಾದದಲ್ಲಿ ಈ ಮೂವರು ವ್ಯಕ್ತಪಡಿಸಿದ ಅಭಿಪ್ರಾಯದ ಆಯ್ದ ಅಂಶ ಇಲ್ಲಿದೆ.

***

ADVERTISEMENT

ಮಾಹಿತಿ ಕೊಡದೇ ಇದ್ದರೆ ಕದಿಯಬೇಕೆ?
ಸಂಸದೀಯ ವ್ಯವಹಾರ, ಪ್ರಜಾತಂತ್ರದ ಬಗ್ಗೆ ಬ್ರಿಟಿಷ್‌ ವ್ಯವಸ್ಥೆಯನ್ನು ನಾವು ಅಳವಡಿಸಿಕೊಂಡಿದ್ದೇವೆ. ವಿರೋಧ ಪಕ್ಷದ ನಾಯಕರೂ ಮುಖ್ಯ ಅಂಗ ಎನ್ನುವುದು ಅದರಲ್ಲಿ ಸ್ಪಷ್ಟವಾಗಿದೆ. ವಿರೋಧ ಪಕ್ಷದ ನಾಯಕನನ್ನು ಛಾಯಾ ಮುಖ್ಯಮಂತ್ರಿ ಎಂದೇ ಹೇಳುತ್ತೇವೆ. ಅವರು ನೇಪಥ್ಯ ಸಚಿವ ಸಂಪುಟದ ಮುಖ್ಯಮಂತ್ರಿ. ಹಕ್ಕು ಚ್ಯುತಿ ತಂದು ಸರ್ಕಾರವನ್ನು ಬೀಳಿಸಿದರೆ, ನೇಪಥ್ಯ ಸಚಿವ ಸಂಪುಟದ ಮುಖ್ಯಸ್ಥರನ್ನು ರಾಜ್ಯಪಾಲರು ಸರ್ಕಾರ ರಚಿಸಲು ಆಹ್ವಾನಿಸುತ್ತಾರೆ. ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯುವ ಅಧಿಕಾರ ವಿರೋಧ ಪಕ್ಷದ ನಾಯಕರಿಗಿದೆ. ಶಾಸಕಾಂಗ ಮತ್ತು ರಾಜ್ಯಕ್ಕೆ ಉತ್ತರ ಕೊಡಲು ಜಿಲ್ಲಾಧಿಕಾರಿಗಳು ಬದ್ಧರು.

ಕೊರೊನಾ ಸ್ಥಿತಿಗತಿ ಬಗ್ಗೆ ವಿರೋಧ ಪಕ್ಷದ ನಾಯಕರು ಮಾಹಿತಿ ಪಡೆಯಲು ಸಭೆ ಕರೆದಿದ್ದರು. ಮಾಹಿತಿ ಕೊಡದೇ ಇದ್ದರೆ ಕದಿಯಬೇಕೆ? ವಿರೋಧ ಪಕ್ಷದ ನಾಯಕನ ಕಾರ್ಯವ್ಯಾಪ್ತಿ ಬಗ್ಗೆ ಚರ್ಚಿಸುವುದಾದರೆ, ಪತ್ರ ಮಾತ್ರ ಬರೆಯಬಹುದು ಎಂದು ಎಲ್ಲಿ ಹೇಳಿದೆ? ಸಂದಿಗ್ಧ ಸನ್ನಿವೇಶಗಳಲ್ಲಿ ಆಡಳಿತ ಪಕ್ಷದ ನಾಯಕರ ಜೊತೆ ವಿರೋಧ ಪಕ್ಷದ ನಾಯಕರು ಸಮಾಲೋಚಿಸಿ, ಸಾಮೂಹಿಕ ತೀರ್ಮಾನ ತೆಗೆದುಕೊಳ್ಳಬೇಕು. ವಿರೋಧ ಪಕ್ಷದ ನಾಯಕ ಇಡೀ ರಾಜ್ಯಕ್ಕೆ ನಾಯಕ. ಅವರಿಗೂ ಉತ್ತರದಾಯಿತ್ವವಿದೆ. ಹಿಂದಿನ ಸರ್ಕಾರಗಳು ಏನು ತಪ್ಪು ಮಾಡಿದೆ ಎನ್ನುವುದು ಅಪ್ರಸ್ತುತ. ವಿರೋಧ ಪಕ್ಷದ ನಾಯಕನ ಬಳಿಯೂ ಅಧಿಕೃತವಾಗಿ ಮಾಹಿತಿ ಇರಬೇಕು.
-ಪ್ರೊ.ರವಿವರ್ಮ ಕುಮಾರ್‌,ಮಾಜಿ ಅಡ್ವೊಕೇಟ್‌ ಜನರಲ್

ಎಲ್ಲವನ್ನೂ ಪ್ರಶ್ನಿಸುತ್ತಾ, ಟೀಕಿಸುತ್ತಾ ಹೋದರೆ ಹೇಗೆ?
ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ಪಡೆಯಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಯಾರೂ ಅಡ್ಡಿಪಡಿಸಿಲ್ಲ. ಆದರೆ, ಸಭೆ ನಡೆಸಲು ಅವಕಾಶ ಇಲ್ಲ. ಜಿಲ್ಲಾಧಿಕಾರಿಗಳ ಜೊತೆ ಮುಖ್ಯಮಂತ್ರಿ ಸಭೆ ಮಾಡುತ್ತಾರೆ. ಆರೋಗ್ಯ ಸಚಿವರು ಸಭೆ ಮಾಡುತ್ತಾರೆ. ಮತ್ತೆ ವಿರೋಧಪಕ್ಷದ ನಾಯಕರು ಸಭೆ ಮಾಡುವ ಮೂಲಕ ಗೊಂದಲ ಯಾಕೆ ಸೃಷ್ಟಿ ಮಾಡಬೇಕು. ಪತ್ರ ಬರೆದು ಉತ್ತರ ಬಂದಿಲ್ಲ ಎಂಬ ಬಗ್ಗೆ ವಿಧಾನಸಭೆ, ವಿಧಾನಪರಿಷತ್‌ನಲ್ಲಿ ಚರ್ಚೆ ಮಾಡಲಿ.

ಅಲ್ಲಿ ಚರ್ಚೆ ಮಾಡದೆ, ಕಲಾಪ ಬಹಿಷ್ಕರಿಸುತ್ತಾರೆ. ವಿರೋಧ ಪಕ್ಷದ ನಾಯಕರಾಗಿದ್ದ ಯಡಿಯೂರಪ್ಪ, ಈಶ್ವರಪ್ಪ, ಉಗ್ರಪ್ಪ ಅವರಿಗೂ ಸಭೆ ಮಾಡಲು ಹಿಂದೆ ಅವಕಾಶ ನೀಡಿಲ್ಲ. ಕೋವಿಡ್‌ ವಿಷಯದಲ್ಲಿ ಮುಖ್ಯಮಂತ್ರಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಸಿದ್ದರಾಮಯ್ಯ ಬರೇ ಟೀಕೆ ಮಾಡುತ್ತಿದ್ದಾರೆ. ಕೊರೊನಾ ನಿರ್ವಹಣೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಯಾವುದೇ ದಾಖಲೆ ಇಲ್ಲದೆ ಆರೋಪ ಮಾಡಿದ್ದರು. ವಿವಾದ, ಟೀಕೆ ಮಾಡುವ ಸಮಯ ಇದಲ್ಲ. ಪ್ರತಿಪಕ್ಷ ನಾಯಕರು ಜಿಲ್ಲಾಧಿಕಾರಿಗಳ ಸಭೆ ಕರೆದು ಚರ್ಚಿಸಬಹುದೇ ಎಂದು ವಿಧಾನ ಸಭೆಯಲ್ಲಿ ಚರ್ಚಿಸಿ, ನಿಯಮ ರೂಪಿಸಲಿ.
-ಅಶ್ವತ್ಥನಾರಾಯಣ ಗೌಡ,ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

***

ಪ್ರಜಾಪ್ರಭುತ್ವಕ್ಕೆ ದೊಡ್ಡ ಕೊಡಲಿ ಪೆಟ್ಟು
ಮಾಹಿತಿ ಪಡೆಯಲು ಜಿಲ್ಲಾಧಿಕಾರಿಗಳ ಜೊತೆ ವಿರೋಧ ಪಕ್ಷದ ನಾಯಕ ಸಭೆ ಮಾಡಬಾರದು ಎನ್ನುವುದು ಪ್ರಜಾಪ್ರಭುತ್ವ ವಿರೋಧಿ ನಿಲುವು. ನಾವು ನಮ್ಮ ಸಂಸದೀಯ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ. ಸರ್ಕಾರದ ಈ ನಡೆ ಅಗೌರವ ಕೊಡುವಂಥದ್ದು. ಶಾಸಕಾಂಗದಲ್ಲಿ ವಿರೋಧ ಪಕ್ಷದ ನಾಯಕನಿಗೆ ಮಾಹಿತಿ ಪಡೆಯುವ ಎಲ್ಲ ಹಕ್ಕು ಇದೆ.ನಿರ್ದೇಶನ ಕೊಡಬಾರದು, ಸಭೆ ಮಾಡಬಹುದು.

ಆದರೆ, ಮಾಹಿತಿ ಪಡೆಯಲು ಸರ್ಕಾರ ಅಡ್ಡಿಪಡಿಸುತ್ತಿದೆ. ಪಾರದರ್ಶಕ ವ್ಯವಸ್ಥೆಯನ್ನು ಅಲ್ಲಗಳೆಯುತ್ತಿದೆ. ಮಾಹಿತಿ ಪಡೆಯುವುದು ತಪ್ಪೇ? ಡೆತ್‌ ಅಡಿಟ್‌ ಕೇಳುವುದು ತಪ್ಪೇ? ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಅಂದಾಜು ಸಮಿತಿ ಕೆಲಸ ಮಾಡದಂತೆ ಅಧಿಕಾರವನ್ನೇ ಮೊಟಕುಗೊಳಿಸಲಾಗಿದೆ. ಕೋವಿಡ್‌ ಕಾರಣದಿಂದ ಮಾಹಿತಿ ಪಡೆಯುವುದು ತಪ್ಪು ಎಂಬ ನಿಲುವಿಗೆ ಬಂದರೆ, ಅದು ಪ್ರಜಾಪ್ರಭುತ್ವಕ್ಕೆ ದೊಡ್ಡ ಕೊಡಲಿ ಪೆಟ್ಟು. 2016ರಲ್ಲಿ ನಮ್ಮ ಸರ್ಕಾರ ಜಗದೀಶ ಶೆಟ್ಟರ್, ಈಶ್ವರಪ್ಪ ಅವರಿಗೆ ಸಭೆ ಮಾಡಲು ಅವಕಾಶ ನೀಡಿರಲಿಲ್ಲವೆಂದರೆ ಆಗ ಯಾಕೆ ಸುಮ್ಮನೆ ಕುಳಿತಿರಿ. ಸಂಸದೀಯ ವ್ಯವಸ್ಥೆ, ಪ್ರಜಾಪ್ರಭಯತ್ವದಲ್ಲಿ ನಂಬಿಕೆ ಇದ್ದರೆ ವಿರೋಧ ಪಕ್ಷದ ನಾಯಕರಿಗೆ ಸಭೆ ನಡೆಸಿ ಮಾಹಿತಿ ಪಡೆಯಲು ಅವಕಾಶ ನೀಡಬೇಕು. ಉತ್ತರದಾಯಿತ್ವ ಇರಬೇಕು ಎಂದರೆ ಮಾಹಿತಿ ಪಾರದರ್ಶಕ ಆಗಿರಬೇಕು. ಸರ್ಕಾರದ ನಡೆ ಹಕ್ಕು ಚ್ಯುತಿ ಆಗುತ್ತದೆ.
-ಎಚ್‌.ಕೆ. ಪಾಟೀಲ,ಕಾಂಗ್ರೆಸ್‌ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.