ADVERTISEMENT

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸೂಕ್ಷ್ಮ ವಲಯ ಕಡಿತಕ್ಕೆ ತೀವ್ರ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 12:34 IST
Last Updated 24 ಫೆಬ್ರುವರಿ 2020, 12:34 IST
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿ ಕಡಿತ ಮಾಡುವುದುನ್ನು ವಿರೋಧಿಸಿ ನಮ್ಮ ಬೆಂಗಳೂರು ಪ್ರತಿಷ್ಠಾನದ ಪ್ರತಿನಿಧಿಗಳು ಮತ್ತು ಪರಿಸರವಾದಿಗಳು ಫಲಕ ಪ್ರದರ್ಶಿಸಿದರು
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿ ಕಡಿತ ಮಾಡುವುದುನ್ನು ವಿರೋಧಿಸಿ ನಮ್ಮ ಬೆಂಗಳೂರು ಪ್ರತಿಷ್ಠಾನದ ಪ್ರತಿನಿಧಿಗಳು ಮತ್ತು ಪರಿಸರವಾದಿಗಳು ಫಲಕ ಪ್ರದರ್ಶಿಸಿದರು   

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯವನ್ನು (ಇಎಸ್‌ಜೆಡ್‌) ಕಡಿತಗೊಳಿಸಬಾರದು ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನ (ಎನ್‌ಬಿಎಫ್‌) ಒತ್ತಾಯಿಸಿದೆ.

‘268.96 ಚದರ ಕಿ.ಮೀ. ವಿಸ್ತೀರ್ಣದ ಇಎಸ್‌ಜೆಡ್‌ ವ್ಯಾಪ್ತಿಯನ್ನು 168.84 ಚದರ ಕಿಲೋ ಮೀಟರ್‌ಗೆ ಕುಗ್ಗಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಕೇಂದ್ರ ಪರಿಸರ ಸಚಿವಾಲಯಕ್ಕೆ ಪತ್ರ ಬರೆದಿರುವುದು ದುರದೃಷ್ಟಕರ’ ಎಂದು ಎನ್‌ಬಿಎಫ್‌ ಪ್ರಧಾನ ವ್ಯವಸ್ಥಾಪಕ ಹರೀಶ್‌ಕುಮಾರ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಪರಿಸರ ಸೂಕ್ಷ್ಮ ವಲಯವನ್ನು ಕುಗ್ಗಿಸುವುದರಿಂದ ಬೆಂಗಳೂರಿಗರ ಆರೋಗ್ಯದ ಮೇಲೆ ನೇರವಾಗಿ ದುಷ್ಪರಿಣಾಮ ಉಂಟಾಗಲಿದೆ. ವನ್ಯಮೃಗಗಳ ಕಾರಿಡಾರ್‌ಗೂ ಇದು ಧಕ್ಕೆ ತರಲಿದೆ. ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷಕ್ಕೆ ದಾರಿ ಮಾಡಿಕೊಡಲಿದೆ. ಕಾವೇರಿ ನದಿಯನ್ನು ಸೇರಿಕೊಳ್ಳುವ ನೀರಿನ ತೊರೆಗಳು ನಾಶವಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಬೆಂಗಳೂರಿನಲ್ಲಿ ಶೇ 25ರಷ್ಟು ಮಕ್ಕಳು ಈಗಾಗಲೇ ಆಸ್ತಮಾದಿಂದ ಬಳಲುತ್ತಿವೆ. ಇನ್ನಷ್ಟು ಮಕ್ಕಳು ಆಸ್ತಮಾಕ್ಕೆ ಬಲಿಯಾಗಬೇಕು ಎಂದು ಸರ್ಕಾರ ಬಯಸುತ್ತಿದೆಯೇ’ ಎಂದು ಪ್ರಶ್ನಿಸಿದರು.

‘ಸಮಾಜಘಾತುಕ ಶಕ್ತಿಗಳು ಈ ರೀತಿಯ ಮೂರ್ಖ ಸಲಹೆ ನೀಡಿರಬೇಕು. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ, ರಿಯಲ್ ಎಸ್ಟೇಟ್‌ ಮಾಫಿಯಾವನ್ನು ಸಕ್ರಮಗೊಳಿಸುವ ಪ್ರಯತ್ನ ಇದಾಗಿದೆ. ಪರಿಸರ ದೃಷ್ಟಿಕೋನವನ್ನು ಸರ್ಕಾರ ಮನಗಾಣಬೇಕು’ ಎಂದು ಒತ್ತಾಯಿಸಿದರು.

‘ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸಲಹೆಗಳಿಗೆ ಮನ್ನಣೆ ನೀಡಬೇಕು. ಜನರ ಆಕಾಂಕ್ಷೆಗಳನ್ನು ಗೌರವಿಸಬೇಕು. ಪರಿಸರ ಸೂಕ್ಷ್ಮ ವಲಯವನ್ನು ಕುಗ್ಗಿಸುವ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಪರಿಸರ ಸಚಿವಾಲಯಕ್ಕೆ ಸಲ್ಲಿಸಿದ ಕೋರಿಕೆಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು’ ಎಂದು ಮನವಿ ಮಾಡಿದರು.

‘ವೃಕ್ಷಾ’ ಸಂಸ್ಥಾಪಕ ವಿಜಯ್ ನಿಶಾಂತ್, ‘ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ದುರಾಸೆಯ ಲಾಬಿಗೆ ಕೊನೆಯೇ ಇಲ್ಲ. ತಮ್ಮದೇ ಮಕ್ಕಳ ಆರೋಗ್ಯ ಅಪಾಯದಲ್ಲಿದೆ ಎಂಬ ವಾಸ್ತವವನ್ನು ಅವರು ಅರ್ಥ ಮಾಡಿಕೊಳ್ಳುವುದಿಲ್ಲ. ಅವರ ದುರಾಸೆಗಾಗಿ ಬೆಂಗಳೂರನ್ನು ವಿಸ್ತರಿಸುವುದು ಸಾಧುವಲ್ಲ. ಬನ್ನೇರುಘಟ್ಟ ಪರಿಸರ ಸೂಕ್ಷ್ಮ ಪ್ರದೇಶವನ್ನು ಮೂಲದಲ್ಲಿ ಘೋಷಿಸಿದಷ್ಟೇ ಪ್ರಮಾಣದಲ್ಲಿ ಉಳಿಸಬೇಕು’ ಎಂದು ಆಗ್ರಹಿಸಿದರು.

‘ನಗರವನ್ನು ಪ್ರತಿನಿಧಿಸುವ ಮೂವರು ಸಂಸದರು ಇಎಸ್‌ಜೆಡ್‌ ಕುಗ್ಗಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ ಮುಖ್ಯಮಂತ್ರಿ ಅವರು ಲೆಕ್ಕಿಸಿಲ್ಲ. ‘ಯುನೈಟೆಡ್ ಬೆಂಗಳೂರು’ನೇತೃತ್ವದಲ್ಲಿ ವಿವಿಧ ಸಂಘ–ಸಂಸ್ಥೆಗಳನ್ನು ಈ ಹೋರಾಟದಲ್ಲಿ ತೊಡಗಿಕೊಂಡಿವೆ. ಸರ್ಕಾರ ನಮ್ಮ ಒತ್ತಾಯಕ್ಕೆ ಮಣಿಯದೇ ಇದ್ದರೆ ಬೀದಿಗಿಳಿದು ಹೋರಾಟ ನಡೆಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.