ADVERTISEMENT

ಅನುದಾನ ಕಡಿತಕ್ಕೆ ಆಕ್ಷೇಪ: ರಾಜ್ಯದ ಪಾಲು ನೀಡುವಂತೆ ಕೇಂದ್ರಕ್ಕೆ ಪತ್ರ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 21:04 IST
Last Updated 19 ಫೆಬ್ರುವರಿ 2020, 21:04 IST
   

ಬೆಂಗಳೂರು: ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಲೇಬೇಕಾದ ಪಾಲಿನಲ್ಲಿ ಕಡಿತ ಮಾಡಿರುವ ಕ್ರಮಕ್ಕೆ ಅತೃಪ್ತಿ ವ್ಯಕ್ತಪಡಿಸಿ ರಾಜ್ಯ ಸರ್ಕಾರ ಪತ್ರ ಬರೆದಿದೆ.

‘ಯಾವ ಬಾಬ್ತಿನಿಂದ ಎಷ್ಟು ಪ್ರಮಾಣದಲ್ಲಿ ಕಡಿತವಾಗಲಿದೆ ಎಂದು ವಿವರಿಸಲಾಗಿದ್ದು, ಅನುದಾನ ಬಿಡುಗಡೆ ಮಾಡುವಾಗ ರಾಜ್ಯದ ಪಾಲನ್ನು ನೀಡುವಂತೆ ಪತ್ರದಲ್ಲಿ ಕೋರಿರುವುದು ಹೌದು. ಇದು ಕೇಂದ್ರಕ್ಕೆ ರಾಜ್ಯ ಸರ್ಕಾರ ಮಾಡಿರುವ ಮನವಿಯಷ್ಟೆ’ ಎಂದು ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಆಡಳಿತ ನಡೆಸುತ್ತಿದ್ದರೂ ಉತ್ತರದ ರಾಜ್ಯಗಳಿಗೆ ಸಿಕ್ಕಿರುವ ಅನುದಾನಕ್ಕೆ ಹೋಲಿಸಿದರೆ ಕರ್ನಾಟಕಕ್ಕೆ ದೊಡ್ಡ ಮಟ್ಟದ ಅನ್ಯಾಯವಾಗಿದೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಅದನ್ನು ರಾಜ್ಯ ಸರ್ಕಾರ ಕೂಡ ಈಗ ಪ್ರಸ್ತಾಪಿಸಿದಂತಾಗಿದೆ.

ADVERTISEMENT

₹17 ಸಾವಿರ ಕೋಟಿ ಬಾಕಿ: ‘2019–20ರ ಸಾಲಿನಲ್ಲಿ ಕೇಂದ್ರ ನೀಡಲೇಬೇಕಾಗಿದ್ದ ಮೊತ್ತದಲ್ಲಿ ₹17 ಸಾವಿರ ಕೋಟಿ ಕೊರತೆ
ಯಾಗಲಿದೆ. ಅನುದಾನ ಹಂಚಿಕೆ ಲೆಕ್ಕದಲ್ಲಿ ₹8,813 ಕೋಟಿ ಕೈತಪ್ಪುವುದು ಖಚಿತ. ಜಿಎಸ್‌ಟಿ ಪಾಲಿನಲ್ಲಿ ಕೊನೆಯ ಕಂತು ಅಂದಾಜು
₹4 ಸಾವಿರ ಕೋಟಿ ಬರುವುದು ಅನುಮಾನ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಜಿಎಸ್‌ಟಿ ಪರಿಹಾರ ರೂಪದಲ್ಲಿ ₹5 ಸಾವಿರ ಕೋಟಿ ಬಾಕಿ ಇದ್ದು, ಆ ಪೈಕಿ ₹3 ಸಾವಿರ ಕೋಟಿ ಬರುವ ಸಾಧ್ಯತೆ ಕಡಿಮೆ’ ಎಂದು ಹಣಕಾಸು ಇಲಾಖೆ ಮೂಲಗಳು ಹೇಳಿವೆ.

‘15 ಹಣಕಾಸು ಆಯೋಗದ ಲೆಕ್ಕಾಚಾರದಲ್ಲಿ ಅನುದಾನ ಹಂಚಿಕೆಯ ಮಾನದಂಡಗಳನ್ನು ಬದಲಾವಣೆ ಮಾಡಿದ್ದರಿಂದಾಗಿ ದೊಡ್ಡ ಪ್ರಮಾಣದ ನಷ್ಟ ಆಗಲಿದೆ. ಕೇಂದ್ರ ಬಜೆಟ್‌ನ ಅಂದಾಜಿನಂತೆ ₹5,102 ಕೋಟಿ ಕೊರತೆಯಾಗಲಿದೆ. ಕೇಂದ್ರ ಆರ್ಥಿಕ ಇಲಾಖೆಯ ದಾಖಲೆಗಳ ಅನುಸಾರ ಈ ಮೊತ್ತ ₹11,215 ಕೋಟಿಯಷ್ಟಾಗಲಿದೆ. ಇದರ ಜತೆಗೆ ಜಿಎಸ್‌ಟಿ ಪರಿಹಾರ ಮೊತ್ತದಲ್ಲಿ ಎಷ್ಟು ಕಡಿತವಾಗಲಿದೆ ಎಂಬುದು ಗೊತ್ತಿಲ್ಲ. ಬಜೆಟ್‌ ಮಂಡನೆ ಹೊತ್ತಿಗೆ ಈ ಲೆಕ್ಕಾಚಾರ ಪಕ್ಕಾ ಆಗಲಿದೆ. ಇದು ಹೊಸ ಯೋಜನೆಗಳ ಘೋಷಣೆಗೆ ಅಡ್ಡಿಯಾಗಿರುವುದಂತೂ ಸತ್ಯ’ ಎಂದು ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.