ADVERTISEMENT

ಮುಂಗಾರು ಬಿರುಸು: ಕರಾವಳಿಯಲ್ಲಿ 'ಆರೆಂಜ್ ಅಲರ್ಟ್'

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 20:14 IST
Last Updated 18 ಜುಲೈ 2020, 20:14 IST

ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಬಿರುಸುಗೊಂಡಿರುವುದರಿಂದ ಇದೇ 19 ಮತ್ತು 20ರಂದು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇರುವುದರಿಂದ ಎರಡೂ ದಿನ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ.

ಕರಾವಳಿಯಲ್ಲಿ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಜೊತೆಗೆ ಗರಿಷ್ಠ 4.1 ಮೀಟರ್ ಗಳಷ್ಟು ಎತ್ತರದ ಅಲೆಗಳು ಏಳುತ್ತಿರುವುದರಿಂದ ಮೀನುಗಾರರು ಕಡಲಿಗೆ ಇಳಿಯದಂತೆ ಇಲಾಖೆ ಎಚ್ಚರಿಸಿದೆ.

ADVERTISEMENT

ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಜು.21ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, 'ಯೆಲ್ಲೊ ಅಲರ್ಟ್' ಘೋಷಿಸಲಾಗಿದೆ.ಉತ್ತರ ಒಳನಾಡಿನಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಕೆಲವೆಡೆ ಸಾಧಾರಣ ಮಳೆಯಾಗಬಹುದು.

ಮಳೆ, ಎಲ್ಲಿ ಎಷ್ಟು?: ದಕ್ಷಿಣ ಕನ್ನಡ ಜಿಲ್ಲೆಯ ಮಾಣಿಯಲ್ಲಿ ಗರಿಷ್ಠ 15 ಸೆಂ.ಮೀ ಮಳೆಯಾಗಿದೆ. ಕೊಲ್ಲೂರು 14, ಆಗುಂಬೆ 13, ಉಡುಪಿ 11, ಕದ್ರಾ 10, ಕಾರವಾರ, ಅಂಕೋಲಾ, ಕುಂದಾಪುರ, ಮೂಡುಬಿದರೆ, ಬೆಳ್ತಂಗಡಿ 9, ಮಂಗಳೂರು, ಹೊಸನಗರ, ಭಾಗಮಂಡಲ 8, ಉಪ್ಪಿನಂಗಡಿ, ಭಟ್ಕಳ 7, ಸಾಗರ, ತೀರ್ಥಹಳ್ಳಿ,ಮಡಿಕೇರಿ 3, ಬೆಳಗಾವಿ, ಸಕಲೇಶಪುರ, ಹಾಸನ, ಸೊರಬ 2, ನಿಪ್ಪಾಣಿ, ಬೈಲಹೊಂಗಲ, ಚಿಕ್ಕಮಗಳೂರು, ಎಚ್.ಡಿ.ಕೋಟೆ ಹಾಗೂ ಮಾಗಡಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.