ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಕ್ಷಿಣ ಭಾರತದ ಅತಿ ದೊಡ್ಡ ‘ಅಂಗಾಂಗ ಮರು ಪಡೆಯುವ ಕೇಂದ್ರ’ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
‘ನಾಲ್ಕರಿಂದ ಆರು ತಿಂಗಳಲ್ಲಿ ಈ ಕೇಂದ್ರ ಕಾರ್ಯಾರಂಭ ಮಾಡಲಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ ತಿಳಿಸಿದ್ದಾರೆ.
ವೈದ್ಯಕೀಯ ಶಿಕ್ಷಣ ಇಲಾಖೆಯು ವಿಕ್ಟೋರಿಯಾದಲ್ಲಿ ಈ ಕೇಂದ್ರ ಸ್ಥಾಪಿಸಲು ಮತ್ತು ಅಸ್ತಿತ್ವದಲ್ಲಿರುವ ಸೌಲಭ್ಯಗಳನ್ನು ನವೀಕರಿಸಲು ₹ 1 ಕೋಟಿ ಅನುದಾನ ಮಂಜೂರು ಮಾಡಿದೆ. ವಿಕ್ಟೋರಿಯಾ ಆಸ್ಪತ್ರೆಯ 125ನೇ ವರ್ಷಾಚರಣೆ ಸಂದರ್ಭದಲ್ಲಿ ಈ ಮಹತ್ವದ ಕೇಂದ್ರ ಆರಂಭವಾಗಲಿದೆ.
‘ಕಸಿಗೆ ಅಂಗಾಂಗಗಳ ಖರೀದಿಯನ್ನು ಸುಗಮಗೊಳಿಸುವ ಮೂಲಕ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಆಸ್ಪತ್ರೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇಲ್ಲಿ ತೀವ್ರ ನಿಗಾ ಘಟಕ, ಶಸ್ತ್ರಚಿಕಿತ್ಸಾ ಕೊಠಡಿ, ಪ್ರಯೋಗಾಲಯ ಸೌಲಭ್ಯಗಳು ಮತ್ತು ವಿವಿಧ ಹಂತದ ತನಿಖಾ ಸಾಮರ್ಥ್ಯಗಳನ್ನು ಹೊಂದಿರುವ ಸಮಗ್ರ ಸೇವೆ ಲಭ್ಯವಾಗಲಿದೆ’ ಎಂದು ಸಚಿವರು ತಿಳಿಸಿದ್ದಾರೆ.
‘ಸಂಭಾವ್ಯ ದಾನಿಗಳ ಗುರುತಿಸುವಿಕೆ ಮತ್ತು ಸುರಕ್ಷಿತ ಅಂಗಾಂಗ ದಾನ ಪ್ರಕ್ರಿಯೆಗೆ ಕುಟುಂಬ ಸಮಾಲೋಚನೆ, ಉನ್ನತ ಮಟ್ಟದ ಐಸಿಯು ಆರೈಕೆ ಮತ್ತು ಕಾನೂನು ಕ್ರಮಗಳು ಅಗತ್ಯವಿದೆ. ಈ ನಿಟ್ಟಿನಲ್ಲಿ ಸಮಗ್ರ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ. ಅಂಗಾಂಗ ಸಾಗಣೆಗೆ ಅನುಕೂಲ ಆಗಲೆಂದು ಆಸ್ಪತ್ರೆಯಲ್ಲಿ ಹೆಲಿಪ್ಯಾಡ್ ನಿರ್ಮಿಸಲು ಕೂಡಾ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಯೋಜನೆಯಿಂದ ಬಡ ರೋಗಿಗಳಿಗೆ ಅನುಕೂಲ ಆಗಲಿದೆ’ ಎಂದಿದ್ದಾರೆ.
‘ಸಮಗ್ರ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಆರಂಭಿಸುವುದರಿಂದ ಅಂಗಾಂಗ ದಾನ ಕಾರ್ಯಕ್ರಮವನ್ನು ಹೆಚ್ಚಿಸಲು ನಮಗೆ ಅವಕಾಶ ಸಿಗಲಿದೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.