ADVERTISEMENT

ವೈದ್ಯಕೀಯ ಸೀಟು ತಿರಸ್ಕರಿಸಿದರೆ ಇತರ ಕೋರ್ಸ್‌ಗಳಿಗೆ ಅನರ್ಹರು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 20:14 IST
Last Updated 16 ಡಿಸೆಂಬರ್ 2020, 20:14 IST
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ   

ಬೆಂಗಳೂರು: ‘ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಆಧಾರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದಿರುವ ಅಥವಾ ಸರ್ಕಾರಿ ಕೋಟಾದಡಿ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದು, ತಿರಸ್ಕರಿಸಿರುವ ಅಭ್ಯರ್ಥಿಗಳು ಸಿಇಟಿಯಡಿ ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ವಿಜ್ಞಾನ ಕೋರ್ಸ್‌ಗಳಿಗೆ ಸೀಟು ಪಡೆಯಲು ಅರ್ಹರಲ್ಲ’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸ್ಪಷ್ಟಪಡಿಸಿದೆ.

ವೈದ್ಯಕೀಯ ಸೀಟು ಹಂಚಿಕೆ ಸಂಬಂಧ ಮಾಪ್-ಅಪ್ ಸುತ್ತಿನ ಹೆಚ್ಚುವರಿ ಮಾರ್ಗಸೂಚಿ ಬಿಡುಗಡೆ ಮಾಡಿರುವ ಕೆಇಎ, ಈಗಾಗಲೇ ದಂತ ವೈದ್ಯಕೀಯ ಸೀಟು ಪಡೆದ ಅಭ್ಯರ್ಥಿಗಳು ಮಾಪ್-ಆಪ್ ಸುತ್ತಿನಲ್ಲಿ ವೈದ್ಯಕೀಯ ಸೀಟು ಪಡೆಯಲು ಅರ್ಹರಿರುತ್ತಾರೆ.

ಆದರೆ, ದಂತ ವೈದ್ಯಕೀಯ ಸೀಟಿಗೆ ಪ್ರಯತ್ನಿಸಲು ಸಾಧ್ಯವಿಲ್ಲ. ದಂತ ವೈದ್ಯಕೀಯ ಸೀಟು ಪಡೆದು ಕಾಲೇಜಿಗೆ ವರದಿ ಮಾಡಿಕೊಂಡಿರುವ ಅಭ್ಯರ್ಥಿಗಳು ಕೂಡ ವೈದ್ಯಕೀಯ ಸೀಟಿಗೆ ಪ್ರಯತ್ನಿಸಬಹುದು. ಹಾಗೆಯೇ ದಂತ ವೈದ್ಯಕೀಯ ಸೀಟಿಗೆ ಶುಲ್ಕ ಪಾವತಿಸಿ, ಕಾಲೇಜಿಗೆ ವರದಿ ಮಾಡಿಕೊಳ್ಳದ ಅಭ್ಯರ್ಥಿಗಳು ಕೂಡ ವೈದ್ಯಕೀಯ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಕೆಇಎ ತಿಳಿಸಿದೆ.

ADVERTISEMENT

ಮಾಪ್-ಅಪ್ ಸುತ್ತಿನಲ್ಲಿ ಮೆರಿಟ್ ಆಧಾರದಲ್ಲಿ ವೈದ್ಯಕೀಯ ಸೀಟು ಲಭ್ಯವಾಗದಿದ್ದರೆ, ಈ ಹಿಂದೆ ಹಂಚಿಕೆಯಾಗಿರುವ ದಂತ ವೈದ್ಯಕೀಯ ಸೀಟಿಗೆ ಸಂಬಂಧಪಟ್ಟ ಕಾಲೇಜಿನಲ್ಲಿ ನಿರ್ದಿಷ್ಟ ದಿನದೊಳಗೆ ವರದಿ ಮಾಡಿಕೊಳ್ಳಬೇಕು. ವರದಿ ಮಾಡಿಕೊಳ್ಳದಿದ್ದರೆ ದಂತ ವೈದ್ಯಕೀಯ ಸೀಟಿಗೆ ಪಾವತಿಸಿರುವ ಶುಲ್ಕ ಹಿಂದಿರುಗಿಸುವುದಿಲ್ಲ ಮತ್ತು ಆ ಶುಲ್ಕವನ್ನು ಪ್ರಾಧಿಕಾರ ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದೆ.

ಸರ್ಕಾರಿ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಪಡೆದಿರುವ ಅಥವಾ ಸರ್ಕಾರಿ ಕೋಟಾದಡಿ ಖಾಸಗಿ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಪಡೆದಿರುವ ಅಭ್ಯರ್ಥಿಗಳು ತಮ್ಮ ಸೀಟನ್ನು ತಿರಸ್ಕರಿಸಿದರೆ, ಯುಜಿಸಿಇಟಿ ಅಡಿಯಲ್ಲಿ ಎಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ ಮತ್ತು ಪಶುಸಂಗೋಪನೆ ಕೋರ್ಸ್‌ಗಳ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದೂ ಕೆಇಎ
ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.