ADVERTISEMENT

ರಾಜ್ಯಕ್ಕೆ 1,200 ಟನ್ ಆಮ್ಲಜನಕ; ಹೈಕೋರ್ಟ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ಕರ್ನಾಟಕಕ್ಕೆ ಆಮ್ಲಜನಕ: ಕೇಂದ್ರಕ್ಕೆ 'ಸುಪ್ರೀಂ' ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 7 ಮೇ 2021, 7:28 IST
Last Updated 7 ಮೇ 2021, 7:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ತಕ್ಷಣದಿಂದ ಅನ್ವಯವಾಗುವಂತೆ ಕರ್ನಾಟಕದ ಆಮ್ಲಜನಕ ಹಂಚಿಕೆಯ ಪಾಲನ್ನು 1,200 ಟನ್‌ಗೆ ಹೆಚ್ಚಿಸಿ’ ಎಂದು ರಾಜ್ಯ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತಳ್ಳಿ ಹಾಕಿದೆ.

'ಹೈಕೋರ್ಟ್‌ ನೀಡಿರುವ ಆದೇಶಕ್ಕೆ ಸಂಬಂಧಿಸಿದಂತೆ ನಾವು ಹಸ್ತಕ್ಷೇಪ ಮಾಡಲಾಗದು’ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಹಾಗೂ ಎಂ.ಆರ್. ಷಾ ಅವರಿದ್ದ ಪೀಠ, 'ಗಂಭೀರ ಸ್ಥಿತಿಯಲ್ಲಿರುವ ಕೋವಿಡ್‌–19 ರೋಗಿಗಳಿಗೆ ಅಗತ್ಯ ಪ್ರಮಾಣದ ಆಮ್ಲಜನಕವನ್ನು ನಿರಾಕರಿಸಲಾಗದು' ಎಂಬ ಎಚ್ಚರಿಕೆಯ ಸಂದೇಶವನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ.

‘ಕೋವಿಡ್–19 ಎರಡನೇ ಅಲೆಯಿಂದ ತತ್ತರಿಸಿರುವ ಜನರ ಅಗತ್ಯಗಳನ್ನು ಅರಿತಿರುವ ಹೈಕೋರ್ಟ್ ಈ ಸಂಬಂಧ ಮೌನವಾಗಿರಲು ಸಾಧ್ಯವಿಲ್ಲ’ ಎಂದೂ ನ್ಯಾಯಪೀಠ ಹೇಳಿದೆ.

ಆಮ್ಲಜನಕ ಪೂರೈಸುವಂತೆ ಹೈಕೋರ್ಟ್‌ಗಳು ನಿರ್ದೇಶನ ನೀಡಲು ಪ್ರಾರಂಭಿಸಿದರೆ ಅಂತಿಮವಾಗಿ ದೇಶದಾದ್ಯಂತ ಅವ್ಯವಸ್ಥೆಗೆ ಕಾರಣವಾಗಬಹುದು ಎಂದು ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮಂಡಿಸಿದ ವಾದವನ್ನು ಪೀಠವು ತಿರಸ್ಕರಿಸಿತು.

ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯು 3.95 ಲಕ್ಷಕ್ಕೆ ಏರಿದಲ್ಲಿ ನಿತ್ಯವೂ ಕನಿಷ್ಠ 1,100 ಟನ್‌ ಹಾಗೂ ಗರಿಷ್ಠ 1,800 ಟನ್ ಆಮ್ಲಜನಕದ ಅಗತ್ಯವಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಮೇ 5ರ ವೇಳೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 4.95 ಲಕ್ಷಕ್ಕೆ ಹೆಚ್ಚಿರುವುದರಿಂದ ಅಲ್ಲಿನ ಪರಿಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ಅರ್ಥೈಸಿಕೊಂಡೇ ಹೈಕೋರ್ಟ್ ಈ ಆದೇಶ ನೀಡಿದೆ ಎಂದೂ ನ್ಯಾಯಪೀಠ ಒತ್ತಿ ಹೇಳಿದೆ.

ಇದನ್ನೂ ಓದಿ:

‘ಜನರು ಎದುರಿಸುತ್ತಿರುವ ಗಂಭೀರ ಸ್ಥಿತಿಯನ್ನು ತಪ್ಪಿಸಲು ನಾವು ಬಯಸುತ್ತೇವೆ. ಹೈಕೋರ್ಟ್‌ ನ್ಯಾಯಾಧೀಶರೂ ಮನುಷ್ಯರೇ. ಕಲಬುರ್ಗಿ ಮತ್ತು ಇತರ ಜಿಲ್ಲೆಗಳಲ್ಲಿ ಸಂಭವಿಸಿರುವ ಸಾವು– ನೋವುಗಳನ್ನು ಅವರು ನೋಡಿಯೇ ಆದೇಶ ನೀಡಿರಬಹುದು. ಇಂಥ ಪರಿಸ್ಥಿತಿಯಲ್ಲಿ ಮಾನವೀಯ ಅಂಶಗಳನ್ನೂ ಕೇಂದ್ರ ಸರ್ಕಾರ ಅರ್ಥಮಾಡಿಕೊಳ್ಳಬೇಕು’ ಎಂದು ನ್ಯಾಯಪೀಠವು ಮೆಹ್ತಾ ಅವರಿಗೆ ಹೇಳಿತು.

ಆಮ್ಲಜನಕದ ಅಗತ್ಯವನ್ನು ಮನಗಾಣುವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸುವಂತೆ ನಾವು ಸೂಚಿಸಿದ್ದೇವೆ. ಅಲ್ಲಿಯವರೆಗೆ ಕಣ್ಣು ಮುಚ್ಚಿ ಕುಳಿತುಕೊಳ್ಳುವಂತೆ ಹೈಕೋರ್ಟ್‌ಗಳಿಗೆ ಹೇಳಲಾಗದು’ ಎಂದು ತಿಳಿಸಿದ ನ್ಯಾಯಪೀಠ, ಕೇಂದ್ರದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ನಿರಾಕರಿಸಿತು.

ಇದನ್ನೂ ಓದಿ:

ಒಂದೇ ವಾರದ ಅವಧಿಯಲ್ಲಿ ರಾಜ್ಯದಾದ್ಯಂತ ಹೊಸದಾಗಿ 1.60 ಲಕ್ಷ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲೇ ಆಮ್ಲಜನಕದ ಉತ್ಪಾದನಾ ಘಟಕಗಳಿದ್ದರೂ ಬೇರೆ ರಾಜ್ಯಗಳಿಂದ ತರಿಸಿಕೊಳ್ಳವಂತೆ ಕೇಂದ್ರ ಸೂಚಿಸುತ್ತಿದೆ. ಕೂಡಲೇ ರಾಜ್ಯದ ಪಾಲಿನ ಆಮ್ಲಜನಕ ಹಂಚಿಕೆ ಹೆಚ್ಚಿಸಲು ಸೂಚಿಸಬೇಕು ಎಂದು ರಾಜ್ಯ ಸರ್ಕಾರವು ಕಳೆದ ಬುಧವಾರ ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠದೆದುರು ಮನವಿ ಮಾಡಿತ್ತು.

ಕರ್ನಾಟಕದ ಹಂಚಿಕೆಯ ಪಾಲನ್ನು ನಿತ್ಯ 865 ಟನ್‌ಗೆ ಬದಲಾಗಿ 965 ಟನ್‌ಗೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಆದರೆ, ನಿತ್ಯ 1,200 ಟನ್‌ ಆಮ್ಲಜನಕ ಹಂಚಿಕೆ ಮಾಡುವಂತೆ ಸೂಚಿಸಿದ್ದ ಹೈಕೋರ್ಟ್‌ ಆದೇಶವನ್ನು ಕೇಂದ್ರ ಪ್ರಶ್ನಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.