ADVERTISEMENT

‘ನೂತನ ಕಾಯ್ದೆಗಳಿಂದ ನ್ಯಾಯಾಂಗದ ಅಧಿಕಾರ ಮೊಟಕು’

ರೈತರನ್ನು ವಿಭಜಿಸುತ್ತಿರುವ ನರೇಂದ್ರ ಮೋದಿ: ಪಿ. ಸಾಯಿನಾಥ್ ಟೀಕೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 19:52 IST
Last Updated 21 ಡಿಸೆಂಬರ್ 2020, 19:52 IST
ಪಿ. ಸಾಯಿನಾಥ್
ಪಿ. ಸಾಯಿನಾಥ್   

ಬೆಂಗಳೂರು: ‘ಕೃಷಿ ಭೂಮಿ ಸಂಬಂಧಿಸಿದ ವಿವಾದಗಳನ್ನು ಜಿಲ್ಲಾಧಿಕಾರಿಗಳ ಮಟ್ಟದಲ್ಲಿಯೇ ಬಗೆಹರಿಸಿಕೊಳ್ಳುವಂತೆ ನೂತನ ಕೃಷಿ ಕಾಯ್ದೆ ಹೇಳುತ್ತದೆ. ರೈತರು ನ್ಯಾಯಾಲಯದ ಮೊರೆ ಹೋಗುವಂತೆಯೇ ಇಲ್ಲ. ಪರೋಕ್ಷವಾಗಿ ಈ ಕಾನೂನು ನ್ಯಾಯಾಂಗದ ಅಧಿಕಾರವನ್ನೇ ಮೊಟಕುಗೊಳಿಸಿದಂತಾಗುತ್ತದೆ’ ಎಂದು ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ಅಭಿಪ್ರಾಯಪಟ್ಟರು.

ಸಿಪಿಐ (ಎಂ) ಪಕ್ಷದ ವತಿಯಿಂದ ಸೋಮವಾರ ಆನ್‌ಲೈನ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ರೈತರ ಪ್ರತಿಭಟನೆ ಮತ್ತು ಕೃಷಿ ಕಾನೂನುಗಳು’ ಕುರಿತು ಮಾತನಾಡಿದ ಅವರು, ‘ನ್ಯಾಯಾಲಯಗಳಿಗಿಂತ ಅಧೀನ ಕಾರ್ಯನಿರ್ವಹಣಾಧಿಕಾರಿಗಳಿಗೆ ನ್ಯಾಯ ತೀರ್ಮಾನದ ಅಧಿಕಾರ ನೀಡುವುದರಿಂದ ಶ್ರೀಮಂತರಿಗೆ, ಕಾರ್ಪೊರೇಟ್‌ ಕಂಪನಿಗಳಿಗೇ ಸಹಾಯವಾಗುತ್ತದೆ’ ಎಂದರು.

‘ಈ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿರುವ ರೈತರನ್ನು ಅವರ ಪಕ್ಷ, ಜಾತಿ, ಧರ್ಮ, ರಾಜ್ಯಗಳ ಆಧಾರದ ಮೇಲೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಭಜನೆ ಮಾಡುತ್ತಿದೆ. ಹರಿಯಾಣ, ಪಂಜಾಬ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಎಷ್ಟೋ ರೈತರು ಮೊದಲು ಸೇನೆಯಲ್ಲಿ ಯೋಧರಾಗಿದ್ದವರು. ಸೇನಾ ಸಮವಸ್ತ್ರ ಧರಿಸಿಯೇ ಅವರು ಹೋರಾಟ ನಡೆಸುತ್ತಿದ್ದಾರೆ. ರೈತರ ಅಹವಾಲು ಆಲಿಸಲು ಕೇಂದ್ರಸರ್ಕಾರ ಮನಸು ಮಾಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಹೊಸ ಕಾಯ್ದೆ ರೈತ ಪರವಾಗಿಯೇ ಇದೆ ಎಂದ ಮೇಲೆ ಈ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಏಕೆ ಮುಂದಾಗುತ್ತಿಲ್ಲ, ದೊಡ್ಡ ಕಂದಕಗಳನ್ನು ತೋಡಿ, ಜಲಪ್ರಹಾರ ನಡೆಸಿ ರೈತರನ್ನು ನಿಯಂತ್ರಿಸುತ್ತಿರುವುದೇಕೆ’ ಎಂದು ಅವರು ಪ್ರಶ್ನಿಸಿದರು.

‘ಹೊಸ ಕಾಯ್ದೆಗಳು ರೈತರಿಗೆ ಮಾತ್ರ ಸಮಸ್ಯೆ ತಂದೊಡ್ಡುವುದಿಲ್ಲ. ದೇಶದ ಪ್ರತಿ ಪ್ರಜೆಯೂ ಭವಿಷ್ಯದಲ್ಲಿ ಇವುಗಳಿಂದ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿರುವ ಕರ್ನಾಟಕ ಸರ್ಕಾರ, ಉತ್ತಮ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿರುವ ಗೋರಕ್ಷಕರಿಗೆ ರಕ್ಷಣೆ ನೀಡುವುದಕ್ಕೆ ಕಾನೂನಿನಲ್ಲಿಯೇ ಅವಕಾಶ ಒದಗಿಸಿದೆ. ಅಂದರೆ, ಗೋರಕ್ಷಣೆಯ ಹೆಸರಿನಲ್ಲಿ ಯಾರು, ಯಾರ ಮೇಲೆ ಗುಂಪು ಹಲ್ಲೆ ಮಾಡಿದರೆ, ಅವರ ಮನೆ ಸುಟ್ಟರೂ ಅದು ‘ಒಳ್ಳೆಯ ಉದ್ದೇಶಕ್ಕೆ’ ಎಂಬ ರೂಪ ಪಡೆಯಬಹುದು. ಇಂತಹ ಕಾನೂನು ರೂಪಿಸುವ ಮೂಲಕ ಬಜರಂಗದಳ, ವಿಶ್ವ ಹಿಂದೂ ಪರಿಷತ್‌ನಂತಹ ಸಂಘಟನೆಗಳ ಕಾರ್ಯಕರ್ತರಿಗೆ ದೊಡ್ಡ ಬಲ ನೀಡಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕೆಲಸದ ಅವಧಿಯನ್ನು 12 ತಾಸುಗಳಿಗೆ ಏರಿಕೆ ಮಾಡಲಾಗಿದೆ. 8 ತಾಸುಗಳಿಗಿಂತ ನಂತರದ 4 ತಾಸುಗಳ ಕೆಲಸಕ್ಕೆ ಹೆಚ್ಚುವರಿ ಭತ್ಯೆಯನ್ನೂ ನೀಡುವುದಿಲ್ಲ. ಈ ರೀತಿ, ರೈತ, ಕಾರ್ಮಿಕ ಮತ್ತು ಜನವಿರೋಧಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ’ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.