ADVERTISEMENT

ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್‌ನಿಂದ ಪಾದಯಾತ್ರೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 14:51 IST
Last Updated 7 ನವೆಂಬರ್ 2021, 14:51 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಡಿಸೆಂಬರ್ ಮೊದಲ ವಾರದಲ್ಲಿ ಮೇಕೆದಾಟುವಿನಿಂದ ಬೆಂಗಳೂರುವರೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಪಾದಯಾತ್ರೆ ನಡೆಸಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಇವರು, 'ನಮ್ಮ ಸರ್ಕಾರ ಮೇಕೆದಾಟು ಯೋಜನೆಯನ್ನು ರೂಪಿಸಿ, ಯೋಜನಾ ವರದಿಯನ್ನು ಸಿದ್ಧಪಡಿಸಿತ್ತು. ಕೇಂದ್ರದ ಬಿಜೆಪಿ ಸರ್ಕಾರ ಅನುಮತಿ ನೀಡದ ಕಾರಣಕ್ಕೆ ಯೋಜನೆ ಜಾರಿ ಸಾಧ್ಯವಾಗಿರಲಿಲ್ಲ. ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕೆ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಸಮುದ್ರದ ಪಾಲಾಗುತ್ತಿರುವ ಹೆಚ್ಚುವರಿ ನೀರನ್ನು ನಾವು ಸದ್ಬಳಕೆ ಮಾಡಿಕೊಂಡರೆ ಅವರಿಗೇನು ತೊಂದರೆ? ತಮ್ಮ ಪಾಲಿನ ನೀರನ್ನು ಪಡೆಯುವುದಕ್ಕೆ ಮಾತ್ರ ತಮಿಳುನಾಡಿಗೆ ಹಕ್ಕಿರುವುದು' ಎಂದಿದ್ದಾರೆ.

'ಮೇಕೆದಾಟು ಯೋಜನೆ ಅನುಷ್ಠಾನವಾದ ಮೇಲೆ ಕೂಡ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರವು ನ್ಯಾಯಾಲಯದ ಆದೇಶದ ಅನುಸಾರ ತಮಿಳುನಾಡಿನ ಪಾಲಿನ ನೀರನ್ನು ಅವರಿಗೆ ಬಿಡುತ್ತದೆ. ಹೀಗಿದ್ದಾಗ ನಮ್ಮ ರಾಜ್ಯದೊಳಗೆ ನಿರ್ಮಿಸಲು ಉದ್ದೇಶಿಸಿರುವ ಯೋಜನೆಗೆ ತಕರಾರು ಮಾಡಲು ತಮಿಳುನಾಡಿಗೆ ಯಾವುದೇ ಹಕ್ಕಿಲ್ಲ' ಎಂದಿದ್ದಾರೆ.

ADVERTISEMENT

'ಮೇಕೆದಾಟು ಯೋಜನೆ ಜಾರಿ ಮಾಡಲು ನಮ್ಮ ರಾಜ್ಯಕ್ಕೆ ಕಾನೂನಾತ್ಮಕ ಸೇರಿದಂತೆ ಎಲ್ಲ ರೀತಿಯ ಹಕ್ಕುಗಳಿವೆ. ಅಣೆಕಟ್ಟು ನಿರ್ಮಾಣಕ್ಕೆ ಕೇಂದ್ರ ಬಿಜೆಪಿ ಸರ್ಕಾರದ ಪರಿಸರ ಇಲಾಖೆಯು ಅನುಮತಿ ಪತ್ರ ನೀಡಬೇಕು ಹಾಗೂ ಬಿಜೆಪಿ ಸರ್ಕಾರ ಯೋಜನೆ ಅನುಷ್ಠಾನಕ್ಕೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.