ADVERTISEMENT

ಭತ್ತದ ಉತ್ಪಾದನೆ ಕುಂಠಿತ: ರಾಜ್ಯದಲ್ಲಿ ಅಕ್ಕಿ ಮತ್ತಷ್ಟು ತುಟ್ಟಿ?

ರಾಜ್ಯದ ಗಿರಣಿಗಳಿಗೆ ತೆಲಂಗಾಣವೇ ಸದ್ಯಕ್ಕೆ ಆಸರೆ

ಕೆ.ಎಚ್.ಓಬಳೇಶ್
Published 15 ಡಿಸೆಂಬರ್ 2023, 19:58 IST
Last Updated 15 ಡಿಸೆಂಬರ್ 2023, 19:58 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಪ್ರಸಕ್ತ ಮುಂಗಾರು ಹಂಗಾಮಿನಡಿ ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಭತ್ತದ ಬಿತ್ತನೆ ಪ್ರದೇಶವು ನಿಗದಿತ ಗುರಿಗಿಂತ ಶೇ 35ರಷ್ಟು ಕಡಿಮೆಯಾಗಿದ್ದು, ಉತ್ಪಾದನೆಯೂ ಕುಂಠಿತವಾಗಿದೆ.

ಹಾಗಾಗಿ, ಮುಂದಿನ ಮೂರ್ನಾಲ್ಕು ತಿಂಗಳಿನಲ್ಲಿ ಅಕ್ಕಿ ಧಾರಣೆಯು ಶೇ 10ರಿಂದ 20ರಷ್ಟು ಹೆಚ್ಚಳವಾಲಿದೆ. ಈಗಾಗಲೇ, ದರ ಹೆಚ್ಚಳದಿಂದ ತತ್ತರಿಸಿರುವ ಗ್ರಾಹಕರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ಮತ್ತೊಂದೆಡೆ ರಾಜ್ಯ ಸರ್ಕಾರದ ‘ಅನ್ನಭಾಗ್ಯ’ ಯೋಜನೆಗೂ ಅಕ್ಕಿ ಪೂರೈಕೆ ಕೊರತೆಯಾಗುವ ಆತಂಕ ಎದುರಾಗಿದೆ.

ADVERTISEMENT

ಸದ್ಯ ಸಗಟು ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್‌ ಸಾಮಾನ್ಯ ಸೋನಾ ಮಸೂರಿ ಅಕ್ಕಿ ದರ ₹6 ಸಾವಿರ ಇದ್ದರೆ, ಆರ್‌ಎನ್‌ಆರ್‌ ಸೋನಾ ತಳಿ ಅಕ್ಕಿ ಧಾರಣೆ ₹6,500 ಇದೆ.  

ರಾಜ್ಯದಲ್ಲಿ ಕಳೆದ ವರ್ಷ ಸುಮಾರು 11 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬಿತ್ತನೆಯಾಗಿತ್ತು. ಈ ಬಾರಿ ಸುಮಾರು 7–8 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಷ್ಟೇ ಬಿತ್ತನೆಯಾಗಿದೆ. ಇದು ಅಕ್ಕಿ ಉತ್ಪಾದನೆ ಕುಸಿತಕ್ಕೆ ಕಾರಣವಾಗಲಿದೆ ಎಂದು ಅಕ್ಕಿ ಗಿರಣಿ ಮಾಲೀಕರು ಹೇಳುತ್ತಾರೆ. 

‘ಈ ಬಾರಿ ಸಕಾಲದಲ್ಲಿ ಮಳೆ ಸುರಿಯಲಿಲ್ಲ. ಹಾಗಾಗಿ, ಜಲಾಶಯಗಳಲ್ಲಿ ನೀರು ಸಂಗ್ರಹವಾಗಲಿಲ್ಲ. ಮಳೆಯಾಶ್ರಿತ ಪ್ರದೇಶದಲ್ಲೂ ಭತ್ತದ ಬಿತ್ತನೆ ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆಯಾಗಿದೆ. ಇದು ಉತ್ಪಾದನೆ ಮೇಲೆ ಪರಿಣಾಮ ಬೀರುವುದು ಸಹಜ’ ಎಂದು ಹೇಳುತ್ತಾರೆ ಬೆಂಗಳೂರು ಜಿಕೆವಿಕೆಯ ಅಖಿಲ ಭಾರತ ಸಂಘಟಿತ ಸಂಶೋಧನಾ ಪ್ರಾಯೋಜನೆಯ (ಭತ್ತದ ವಿಭಾಗ) ಬೇಸಾಯ ಶಾಸ್ತ್ರಜ್ಞ ಡಾ.ಜಿ.ಆರ್. ದಿನೇಶ್.

ತೆಲಂಗಾಣದಿಂದ ಭತ್ತ ಪೂರೈಕೆ

ರಾಜ್ಯದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಅಕ್ಕಿ ಗಿರಣಿಗಳಿವೆ. ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡಿನ ಜಲಾಶಯಗಳ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯುವ ಭತ್ತವು ಈ ಗಿರಣಿಗಳಿಗೆ ಪೂರೈಕೆಯಾಗುತ್ತದೆ. ಆದರೆ, ನೆರೆಯ ರಾಜ್ಯಗಳಲ್ಲೂ ಈ ಬಾರಿ ಮಳೆ ಅಭಾವದಿಂದ ಭತ್ತದ ಬಿತ್ತನೆ ಪ್ರದೇಶ ಕುಂಠಿತವಾಗಿದೆ. 

ಸದ್ಯ ತೆಲಂಗಾಣದ ಗೋದಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದಿರುವ ಭತ್ತವನ್ನು ನಂಬಿಕೊಂಡೇ ರಾಜ್ಯದ ಅಕ್ಕಿ ಗಿರಣಿಗಳು ಕಾರ್ಯ ನಿರ್ವಹಿಸುವಂತಾಗಿದೆ. ಈ ರಾಜ್ಯದಿಂದ ರಾಯಚೂರು ಸೇರಿದಂತೆ ಇತರೆ ಭಾಗದಲ್ಲಿರುವ ಗಿರಣಿಗಳಿಗೆ ಪ್ರತಿದಿನ 40–60 ಸಾವಿರ ಚೀಲಗಳಷ್ಟು ಭತ್ತ ಪೂರೈಕೆಯಾಗುತ್ತಿದೆ.

‘ರಾಜ್ಯದಲ್ಲಿ ಬೇಸಿಗೆ ಅವಧಿಯಲ್ಲಿನ ಭತ್ತದ ಉತ್ಪಾದನೆಯೂ ಶೇ 25ರಿಂದ 30ರಷ್ಟು ಕಡಿಮೆಯಾಗಿದೆ. ಹಾಗಾಗಿ, ಹೊರರಾಜ್ಯದ ಭತ್ತವನ್ನೇ ಗಿರಣಿಗಳು ಅವಲಂಬಿಸುವಂತಾಗಿದೆ’ ಎಂದು ಕರ್ನಾಟಕ ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ಕಾರ್ಯಾಧ್ಯಕ್ಷ ಸಾವಿತ್ರಿ ಪುರುಷೋತ್ತಮ್ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜಮುಡಿ ಅಕ್ಕಿ ದರ ಹೆಚ್ಚಳ

ಮೈಸೂರು ಜಿಲ್ಲೆಯ ತಿ.ನರಸೀಪುರ, ಕೆ.ಆರ್‌. ನಗರ ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ ಭಾಗದಲ್ಲಿ ಹೆಚ್ಚಾಗಿ ರಾಜಮುಡಿ ಭತ್ತ ಬೆಳೆಯಲಾಗುತ್ತಿದೆ. ‘ಮೈಸೂರಿನಲ್ಲಿ ಎರಡು–ಮೂರು ತಿಂಗಳ ಹಿಂದೆ ಒಂದು ಕೆ.ಜಿಗೆ ರಾಜಮುಡಿ ಅಕ್ಕಿ ದರ ₹60ರಿಂದ ₹63ರ ವರೆಗೆ ಇತ್ತು. ಸದ್ಯ ₹ 80ರಿಂದ ₹90ರ ವರೆಗೆ ಹೆಚ್ಚಳವಾಗಿದೆ’ ಎಂದು ವ್ಯಾಪಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.