ADVERTISEMENT

Padma Awards: ಕವಿ ಸಿದ್ದಲಿಂಗಯ್ಯ ಸೇರಿ ರಾಜ್ಯದ ಐವರಿಗೆ ಒಲಿದ ‘ಪದ್ಮಶ್ರೀ’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜನವರಿ 2022, 2:30 IST
Last Updated 26 ಜನವರಿ 2022, 2:30 IST
ಕವಿ ಸಿದ್ದಲಿಂಗಯ್ಯ
ಕವಿ ಸಿದ್ದಲಿಂಗಯ್ಯ   

ನವದೆಹಲಿ: ಕೃಷಿ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಅಬ್ದುಲ್‌ ಖಾದರ್‌ ನಡಕಟ್ಟಿ, ಕೃಷಿ ತಂತ್ರಜ್ಞಾನ ಕ್ಷೇತ್ರದ ಸಂಶೋಧಕ ಎಸ್‌.ಅಯ್ಯಪ್ಪನ್‌ ಸೇರಿದಂತೆ ರಾಜ್ಯದ ಐವರು ಸಾಧಕರು ಪ್ರಸಕ್ತ ಸಾಲಿನ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಒಟ್ಟು 128 ಸಾಧಕರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ‘ಪದ್ಮ’ ಪ್ರಶಸ್ತಿ ಘೋಷಿಸಲಾಗಿದೆ. ಮಂಗಳವಾರ ಸಂಜೆ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಲಾಯಿತು.‌ ಕವಿ ಸಿದ್ದಲಿಂಗಯ್ಯ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಪುರಸ್ಕಾರ ಪ್ರಕಟಿಸಲಾಗಿದೆ.

ಸೇನಾ ಪಡೆಗಳ ಮುಖ್ಯಸ್ಥರಾಗಿದ್ದ ಜನರಲ್‌ ಬಿಪಿನ್ ರಾವತ್‌ ಅವರಿಗೆ ಮರಣೋತ್ತರವಾಗಿ ಪದ್ಮ ವಿಭೂಷಣ ಗೌರವ ನೀಡಲಾಗಿದೆ. ಕಳೆದ ತಿಂಗಳು ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್‌ ದುರಂತದಲ್ಲಿ ಅವರು ಹುತಾತ್ಮರಾಗಿದ್ದರು.

ADVERTISEMENT

ಒಟ್ಟು ನಾಲ್ವರು ಪದ್ಮ ವಿಭೂಷಣ ಮತ್ತು 17 ಮಂದಿ ಪದ್ಮ ಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದು, ಇವರಲ್ಲಿ ಕನ್ನಡಿಗರಿಲ್ಲ.

ಶಿವಮೊಗ್ಗ ಜಿಲ್ಲೆ ಮತ್ತೂರಿನ ಗಮಕಿ ಎಚ್‌.ಆರ್‌.ಕೇಶವಮೂರ್ತಿ, ಗುಡ್ಡಕ್ಕೆ ಸುರಂಗ ಕೊರೆದು ನೀರು ಪಡೆದ ಸಾಹಸಿ, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಅಮೈ ಮಹಾಲಿಂಗ ನಾಯ್ಕ ಅವರೂ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇತ್ತೀಚೆಗಷ್ಟೇ ಸೇನಾ ಹೆಲಿಕಾಪ್ಟರ್‌ ಅಪಘಾತದಲ್ಲಿ ಹುತಾತ್ಮರಾದ ಸೇನಾಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್‌ ಹಾಗೂ ಉತ್ತರ ಪ್ರದೇಶದ ಗೋರಖ್‌ಪುರದ ರಾಧೆಶ್ಯಾಮ್ ಖೆಮ್ಕಾ ಅವರನ್ನು ‘ಪದ್ಮವಿಭೂಷಣ’ (ಮರಣೋತ್ತರ)ಕ್ಕೆ ಆಯ್ಕೆ ಮಾಡಲಾಗಿದೆ.

ಕಾಂಗ್ರೆಸ್‌ ಮುಖಂಡ, ಜಮ್ಮು ಮತ್ತು ಕಾಶ್ಮೀರದ ಗುಲಾಂ ನಬಿ ಆಜಾದ್, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ, ಕಮ್ಯೂನಿಸ್ಟ್‌ ನಾಯಕ ಬುದ್ಧದೇವ ಭಟ್ಟಾಚಾರ್ಯ ಅವರಿಗೆ ‘ಪದ್ಮಭೂಷಣ’ ದೊರೆತಿದೆ.

ಟೋಕಿಯೊ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದ ಐತಿಹಾಸಿಕ ಸಾಧನೆ ಮಾಡಿದ್ದ ನೀರಜ್‌ ಛೋಪ್ರಾ ಅವರು ‘ಪದ್ಮಶ್ರೀ’ ಪುರಸ್ಕೃತರಾಗಿದ್ದಾರೆ.ಪ್ರಶಸ್ತಿಗೆ ಆಯ್ಕೆ ಆದವರಲ್ಲಿ 34 ಜನ ಮಹಿಳೆಯರಿದ್ದರೆ, ವಿದೇಶ ಮೂಲ ಹಾಗೂ ಭಾರತ ಮೂಲದ 10 ಮಂದಿ ಅನಿವಾಸಿಗಳಿದ್ದಾರೆ. ಗೂಗಲ್‌ ಮುಖ್ಯಸ್ಥ ಸುಂದರ್‌ ಪಿಚ್ಛೈ, ಮೈಕ್ರೋಸಾಫ್ಟ್ ಕಂಪೆನಿಯ ಸಿಇಓ ಸತ್ಯನಾರಾಯಣ ನಾದೆಲ್ಲಾ ಅವರು ‘ಪದ್ಮಭೂಷಣ’ ಗೌರವ ಪಡೆದ ಪ್ರಮುಖ ಅನಿವಾಸಿ ಭಾರತೀಯರು.

ಕನ್ನಡದ ಜನಪ್ರಿಯ ಚನಲಚಿತ್ರಗಳ ಗೀತೆಗಳಿಗೆ ಕಂಠ ಒದಗಿಸಿರುವ ಬಾಲಿವುಡ್ ಗಾಯಕ ಸೋನು ನಿಗಮ್‌ ‘ಪದ್ಮಶ್ರೀ’ ಒಲಿದವ
ರಲ್ಲಿ ಪ್ರಮುಖರಾಗಿದ್ದಾರೆ. ವಿಧಾನಸಭೆಚುನಾವಣೆಗೆ ಅಣಿಯಾಗಿರುವ ಉತ್ತರ ಪ್ರದೇಶದ 13, ಉತ್ತರಾಖಂಡದ ನಾಲ್ವರು, ಪಂಜಾಬ್‌ನ ನಾಲ್ವರು, ಮಣಿಪುರದ ಮೂವರು ಹಾಗೂ ಗೋವಾದ ಇಬ್ಬರನ್ನು ಪ್ರಶಸ್ತಿಗೆ ಪರಿಗಣಿಸಿರುವುದು ವಿಶೇಷ.

ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

‘ಪ್ರಶಸ್ತಿ ತಿರಸ್ಕರಿಸುತ್ತೇನೆ’: ‘ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿದ್ದರೆ, ಅದನ್ನು ನಾನು ತಿರಸ್ಕರಿಸುತ್ತೇನೆ’ ಎಂದು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್‌ ಭಟ್ಟಾಚಾರ್ಯ ಅವರು ಹೇಳಿದ್ದಾರೆ.

‘ಪದ್ಮ ಪ್ರಶಸ್ತಿಗೆ ನನ್ನನ್ನು ಆಯ್ಕೆ ಮಾಡಲಾಗಿದೆ ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ’ ಎಂದು ಹೇಳಿದ್ದಾರೆ.

ಪದ್ಮ ವಿಭೂಷಣ,ಪದ್ಮ ಭೂಷಣ ಹಾಗೂಪದ್ಮಶ್ರೀ ಪುರಸ್ಕೃತರ ಪಟ್ಟಿ ಇಲ್ಲಿದೆ;

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.