ADVERTISEMENT

ವಿದೇಶದಲ್ಲಿ ಸಿಂಧೂರ ಧ್ಯಾನ..ಸಂಸತ್ ಮೂಕವಾಗಿರುವುದು ವಿಷಾದನೀಯ: ಸಂಸದ ಕುಮಾರ ನಾಯಕ

​ಪ್ರಜಾವಾಣಿ ವಾರ್ತೆ
Published 31 ಮೇ 2025, 18:10 IST
Last Updated 31 ಮೇ 2025, 18:10 IST
   

ಬೆಂಗಳೂರು: ಪಹಲ್ಗಾಮ್‌ ದಾಳಿ ಹಾಗೂ ಆಪರೇಷನ್ ಸಿಂಧೂರ ಕುರಿತು ಸಂಸತ್ ಮೌನವನ್ನು ರಾಯಚೂರು–ಯಾದಗಿರಿ ಲೋಕಸಭಾ ಕ್ಷೇತ್ರದ ಸದಸ್ಯ ಜಿ.ಕುಮಾರ ನಾಯಕ ಪ್ರಶ್ನಿಸಿದ್ದಾರೆ. ಭಾರತೀಯರ ಧ್ವನಿಯನ್ನು ಪ್ರತಿನಿಧಿಸುವ ಆ ಮನೆ ಮೂಕವಾಗಿರುವುದು ವಿಷಾದನೀಯ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, 'ಕಳೆದ ಒಂದು ವಾರದಿಂದ, ಪಹಲ್ಗಾಮ್‌ನಲ್ಲಿ ನಡೆದ ದಾಳಿ ಮತ್ತು ಆಪರೇಷನ್ ಸಿಂಧೂರ ಕುರಿತು ಕೇಂದ್ರ ಸರ್ಕಾರದ ಸಚಿವರಿಂದ ಹಿಡಿದು ವಿವಿಧ ಪಕ್ಷಗಳ ನಾಯಕರು, ಗಣ್ಯರು, ರಕ್ಷಣಾ ಪಡೆ ಯೋಧರು ಸೇರಿದಂತೆ ವಿವಿಧ ದೇಶಗಳ ರಾಷ್ಟ್ರಾಧ್ಯಕ್ಷರು ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ರಾಷ್ಟ್ರವೇ ಕಂಡಿದೆ. ಕೆಲವರು ಇದಕ್ಕಾಗಿ ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಇನ್ನು ಕೆಲವರು ಮುಂಬರುವ ಚುನಾವಣೆಗಾಗಿ ವೋಟ್‌ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇಂದು, ಭಾರತ ಸಶಸ್ತ್ರ ಪಡೆಗಳ ಮುಖ್ಯ ಸೇನಾ ಮಿಲಿಟರಿ ಪ್ರಾಧಿಕಾರವೂ ಕೂಡ ಈ ರಾಷ್ಟ್ರೀಯ ವಿಷಯದ ಬಗ್ಗೆ ಮಾತನಾಡಲು ವಿದೇಶಿ ವೇದಿಕೆಯನ್ನು ಆಯ್ದುಕೊಂಡಿದೆ. ಆದರೆ, ಈ ಗಂಭೀರ ಕ್ಷಣದಲ್ಲಿ, ಭಾರತದ ಸಂಸತ್ತಿನಲ್ಲಿ ನೀರವ ಮೌನ ಆವರಿಸಿದೆ' ಎಂದಿದ್ದಾರೆ.

'ಭಾರತದ ಸಂಸತ್ ಕೇವಲ ಇಟ್ಟಿಗೆ ಮತ್ತು ಕಲ್ಲಿನ ಕಟ್ಟಡವಲ್ಲ. ಅದು ನಮ್ಮ ಪ್ರಜಾಪ್ರಭುತ್ವದ ಪವಿತ್ರ ಆಲಯ. 140 ಕೋಟಿ ಭಾರತೀಯರ ಚುನಾಯಿತ ಪ್ರತಿನಿಧಿಗಳಾದ ನಾವು, ಸಂಕಷ್ಟದ ಸಂದರ್ಭಗಳಲ್ಲಿ ಒಟ್ಟಿಗೆ ಸೇರಿ, ಚರ್ಚಿಸಿ, ವಿಚಾರ ವಿಮರ್ಶೆ ಮಾಡಿ, ನಮ್ಮ ಸಾಮೂಹಿಕ ಸಂಕಲ್ಪವನ್ನು ಪ್ರದರ್ಶಿಸಬೇಕಾದ ಸ್ಥಳವದು. ಭಾರತೀಯರ ಧ್ವನಿಯನ್ನು ಪ್ರತಿನಿಧಿಸುವ ಆ ಮನೆ ಮೂಕವಾಗಿರುವುದು ವಿಷಾದನೀಯ. ರಾಜ್ಯಕ್ಕೆ ಸ್ಪಷ್ಟತೆ, ಭರವಸೆ ಮತ್ತು ಏಕತೆಯ ಸಂದೇಶ ಬೇಕಾಗಿರುವ ಈ ಸಮಯದಲ್ಲಿ ಸಂಸತ್ ಮೌನವಾಗಿರುವುದು ಸರಿಯಲ್ಲ. ಇದು ಕೇವಲ ಸೇನೆಯ ಕಾರ್ಯಚಟುವಟಿಕೆ ಬಗ್ಗೆ ಅಲ್ಲ. ಇದು ರಾಷ್ಟ್ರೀಯ ಭದ್ರತೆ, ಹೊಣೆಗಾರಿಕೆ ಮತ್ತು ನಮ್ಮ ಸ್ವಾಯತ್ತತೆಯನ್ನು ರಕ್ಷಿಸುವ ಸಮಯ' ಎಂದು ಅವರು ಹೇಳಿದ್ದಾರೆ.

ADVERTISEMENT

'ಜನಪ್ರತಿನಿಧಿಗಳಾದ ನಾವು ಭಾರತೀಯರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮ ಮನದ ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಕೇಳುವ ಮೂಲಕ ಬದ್ಧತೆಯನ್ನು ಎತ್ತಿಹಿಡಿಯಬೇಕಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಟ್ಟಿಗೆ ಕುಳಿತು ಚರ್ಚಿಸುವ, ಪರಿಹಾರ ಕಂಡುಕೊಳ್ಳುವ ಹಾಗೂ ಏಕತೆಯನ್ನು ಹಾಗೂ ಭಾರತದ ಪ್ರಜಾತಂತ್ರದ ಪ್ರೌಢಿಮೆಯನ್ನು ಪ್ರದರ್ಶಿಸುವ ಅವಕಾಶವಿದೆ. ಅಂತಹ ಅವಕಾಶ ವ್ಯರ್ಥವಾಗಬಾರದು. ಸಂಸತ್ತು ತೆರೆಯಬೇಕು. ಜನತೆಗೆ ಉತ್ತರ ಸಂಸತ್ತಿನಿಂದ ಬರಬೇಕೇ ಹೊರತು, ವಿದೇಶಿ ವೇದಿಕೆಗಳಿಂದ ಅಲ್ಲ' ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.