ಸಿದ್ದರಾಮಯ್ಯ
ಬೆಂಗಳೂರು: 'ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿ ಪ್ರಕರಣದಲ್ಲಿ ಕೇಂದ್ರ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
'ಉಗ್ರರ ದಾಳಿ ಪೂರ್ವಯೋಜಿತ ಸಂಚು. ಅಮಾಯಕರ ಪ್ರಾಣಹತ್ಯೆ ಮಾಡಿರುವ ಈ ಘಟನೆ ಅತ್ಯಂತ ಖಂಡನೀಯ. ಘಟನೆಯಲ್ಲಿ ಸುಮಾರು 28 ಜನ ಮೃತಪಟ್ಟಿರುವ ಭೀಕರವಾದ, ಇಷ್ಟು ದೊಡ್ಡಮಟ್ಟದ ಕೃತ್ಯ ನಡೆಯುವ ಮಾಹಿತಿ ಮೊದಲೇ ತಿಳಿಯದಿರುವುದು ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯವಾಗಿದೆ. ಈ ಹಿಂದೆ ನಡೆದ ಪುಲ್ವಾಮಾ ಘಟನೆಯಲ್ಲಿ ಗುಪ್ತಚರ ಮಾಹಿತಿಯ ವೈಫಲ್ಯವಿತ್ತು, ಈಗಲೂ ಅದೇ ಮಾದರಿಯ ಘಟನೆ ಮರುಕಳಿಸಿದೆ. ಭಯೋತ್ಪಾದಕರನ್ನು ನಿರ್ಮೂಲನೆಗೊಳಿಸುವ ಜೊತೆಗೆ ದೇಶದ ಜನರಿಗೆ ಭದ್ರತೆ ನೀಡುವ ಕಾರ್ಯವನ್ನು ಕೇಂದ್ರ ಸಮರ್ಥವಾಗಿ ನಿರ್ವಹಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.
'ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿಯನ್ನು ಅತ್ಯಂತ ತೀವ್ರವಾಗಿ ಖಂಡಿಸುತ್ತೇನೆ. ಕರ್ನಾಟಕದ ಪ್ರವಾಸಿಗರಲ್ಲಿ ಮಂಜುನಾಥ್ ರಾವ್ ಹಾಗೂ ಭರತ್ ಭೂಷಣ್ ಎಂಬುವರು ಮೃತಪಟ್ಟಿದ್ದಾರೆ. ಕನ್ನಡಿಗರ ರಕ್ಷಣೆ ಹಾಗೂ ಇನ್ನಿತರ ವ್ಯವಸ್ಥೆಗಳಿಗಾಗಿ ಅಧಿಕಾರಿಗಳ ತಂಡವನ್ನು ಕಾಶ್ಮೀರಕ್ಕೆ ರವಾನಿಸಲಾಗಿದೆ. ಅಲ್ಲದೇ, ಕಾಶ್ಮೀರಕ್ಕೆ ತೆರಳಿರುವ 40 ಕ್ಕೂ ಅಧಿಕ ಕನ್ನಡಿಗರನ್ನು ವಿಶೇಷ ವಿಮಾನ ವ್ಯವಸ್ಥೆ ಮಾಡಿ ಸುರಕ್ಷಿತವಾಗಿ ಕರೆತರಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನೂ ಕಾಶ್ಮೀರಕ್ಕೆ ಕಳಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.
'ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಚಿಂತಿಸಿ ಪರಿಶೀಲಿಸಲಿದೆ'ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.