ಶಿವಮೊಗ್ಗ: ಕಾಶ್ಮೀರದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸೇರಿದಂತೆ ಕೇಂದ್ರದ ಸುಧಾರಣಾ ಕ್ರಮಗಳನ್ನು ಸಹಿಸದೇ ಅದಕ್ಕೆ ಕೊಳ್ಳಿ ಇಡಲು ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ನಡೆಸಲಾಗಿದೆ ಎಂದು ಕೇಂದ್ರ ಸಚಿವ ಪಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ ರಾವ್ ಅವರ ಪಾರ್ಥಿವ ಶರೀರದ ದರ್ಶನದ ನಂತರ ಪ್ರಲ್ಹಾದ ಜೋಶಿ ನುಡಿನಮನ ಸಲ್ಲಿಸಿದರು.
ಒಂದು ಸಾವು ಆದರೂ ಅದನ್ನು ಸಹಿಸುವುದಿಲ್ಲ. 26 ಮಂದಿ ಪ್ರವಾಸಿಗರ ಸಾವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಭಯೋತ್ಪಾದಕರು ಹಾಗೂ ಅದನ್ನು ಬೆಂಬಲಿಸುವವರಿಗೆ ತಕ್ಕ ಶಾಸ್ತಿ ಮಾಡದೇ ಭಾರತ ಸರ್ಕಾರ ವಿರಮಿಸುವುದಿಲ್ಲ ಎಂದು ಎಚ್ಚರಿಸಿದರು.
ದೇಶದಲ್ಲಿ ಮೊದಲಿದ್ದ ಭಯೋತ್ಪಾದಕ ಚಟುವಟಿಕೆಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸ್ತಬ್ಧಗೊಳಿಸಿತ್ತು. ಈಗ ಮತ್ತೆ ಅದು ಗರಿಗೆದರಿದೆ. ಅದನ್ನು ಹತ್ತಿಕ್ಕಲು ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕವಾಗಿ ಐದು ಕ್ರಮ ಈಗಾಗಲೇ ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ನಮ್ಮ ಜನರಿಗೆ ಯಾರು ನೋವು ಕೊಟ್ಟಿದ್ದಾರೊ ಅವರಿಗೆ ಭಾರತ ಸರ್ಕಾರ ತಕ್ಕ ಶಾಸ್ತಿ ಮಾಡಲಿದೆ ಎಂದರು.
ಪಕ್ಷ–ಪಂಗಡ, ಜಾತಿ, ಧರ್ಮ ಮೀರಿ ಒಗ್ಗಟ್ಟಾಗಿ ಈ ಪರಿಸ್ಥಿತಿಯನ್ನು ಎದುರಿಸಿ ದೇಶದಲ್ಲಿ ಭಯೋತ್ಪಾದನೆಗೆ ಇತಿಶ್ರೀ ಹಾಡಬೇಕಿದೆ. ಇಡೀ ದೇಶ ಹಾಗೂ ಸರ್ಕಾರ ಮಂಜುನಾಥ ರಾವ್ ಅವರ ಕುಟುಂಬದ ಜೊತೆಗೆ ಇರಲಿದೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ, ವಿಧಾನಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅರ್.ಪ್ರಸನ್ನಕುಮಾರ್, ಮಾಜಿ ಶಾಸಕರಾದ ಆಯನೂರು ಮಂಜುನಾಥ, ಕೆ.ಬಿ.ಪ್ರಸನ್ನಕುಮಾರ್, ಎಸ್.ರುದ್ರೇಗೌಡ, ಆರ್‌ಎಸ್ಎಸ್ ಪ್ರಾಂತೀಯ ಕಾರ್ಯವಾಹ ಪಟ್ಟಾಭಿರಾಮ್ ಅಂತಿಮ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.