ಪ್ರಜಾವಾಣಿ ವಾರ್ತೆ
ನವದೆಹಲಿ: ‘ಬೇರೆ ರಾಜ್ಯಗಳಲ್ಲೂ ಭ್ರಷ್ಟಾಚಾರ ಇದೆ. ಅಲ್ಲಿನ ಸಚಿವರು ಸೂಚಿಸಿದರೆ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಆದರೆ, ನಮ್ಮ ಕರ್ನಾಟಕದಲ್ಲಿ ಸಚಿವರು ತಾಕೀತು ಮಾಡಿದರೂ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ’ ಎಂದು ಉದ್ಯಮಿ ಟಿ.ವಿ.ಮೋಹನದಾಸ ಪೈ ಕಿಡಿಕಾರಿದರು.
ಶುಕ್ರವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ಭ್ರಷ್ಟಾಚಾರ ಜಾಸ್ತಿಯಾಗಿದೆ. ಈಗ ದರ ಪಟ್ಟಿ ಹಾಕಿದ್ದಾರೆ. ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳಬೇಕು. ಹುದ್ದೆಗಳಿಗೆ ಕೋಟ್ಯಂತರ ರೂಪಾಯಿ ಕೊಟ್ಟು ಅಧಿಕಾರಿಗಳು ಬರುತ್ತಿದ್ದಾರೆ. ಹುದ್ದೆಗೆ ಬಂದ ಬಳಿಕ ಲಂಚದ ಮೂಲಕ ಹಣ ಗಳಿಸುತ್ತಾರೆ. ಮನೆ ಕಟ್ಟಲು ಅನುಮತಿ ಕೇಳಿದರೆ ಹಣ ಕೇಳುತ್ತಾರೆ. ಯಾವುದೇ ಕೆಲಸಗಳು ಆಗುತ್ತಿಲ್ಲ’ ಎಂದು ದೂರಿದರು.
ಬೆಂಗಳೂರಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಗಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದೆವು. ಯಾವುದೇ ಕೆಲಸ ವೇಗವಾಗಿ ನಡೆಯುತ್ತಿಲ್ಲ. ಸಾರ್ವಜನಿಕ ಸಾರಿಗೆ ಬಲಪಡಿಸಲು ಬಸ್‌ಗಳ ಖರೀದಿ ಮಾಡಬೇಕಿತ್ತು. ಆ ಕೆಲಸವೂ ಆಗಿಲ್ಲ. ಟೆಕ್ ಪಾರ್ಕ್‌ಗಳ ಮುಂದಿರುವ ರಸ್ತೆಗಳನ್ನು ಅಗೆದು ಹಾಗೆಯೇ ಬಿಡಲಾಗಿದೆ. ಇದನ್ನೆಲ್ಲ ಡಿ.ಕೆ. ಶಿವಕುಮಾರ್ ಅವರಿಂದ ಸರಿ ಮಾಡಲು ಸಾಧ್ಯವಾಗುತ್ತಿಲ್ಲ. ಏಕೆ’ ಎಂದು ಅವರು ಪ್ರಶ್ನಿಸಿದರು.
‘ಸುರಂಗ ರಸ್ತೆ ಯೋಜನೆ ಪೂರ್ಣಗೊಳ್ಳಲು 10 ವರ್ಷಗಳು ಬೇಕು. ಅಲ್ಲಿಯವರೆಗೆ ಬೆಂಗಳೂರಿನ ಕಥೆ ಏನು? ಭ್ರಷ್ಟಾಚಾರ ಕಡಿಮೆ ಮಾಡಿ. ಅನುಮತಿಗಳನ್ನು ಬೇಗ ಕೊಡಿ’ ಎಂದು ಅವರು ಮನವಿ ಮಾಡಿದರು.
‘ಬೆಂಗಳೂರಿನ ಜನರು ಅತಿ ಹೆಚ್ಚು ತೆರಿಗೆ ಕೊಡುತ್ತಿದ್ದಾರೆ. ಆದರೆ, ಅವರಿಗೆ ಸಿಗುತ್ತಿರುವುದು ಕಡಿಮೆ. ಬ್ರ್ಯಾಂಡ್ ಬೆಂಗಳೂರು ಹೆಸರು ಹಾಳಾಗುತ್ತಿದೆ. ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವುದು ಏಕೆ ಎಂದು ಅಮೆರಿಕದ ಸ್ನೇಹಿತರು ಕೇಳುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹಾಳಾಗಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಸಾಮಾಜಿಕ ನ್ಯಾಯ ಇರಲಿಲ್ಲವೇ ಎಂದು ಪ್ರಶ್ನಿಸಿದ ಅವರು, ‘ನನ್ನ ಸ್ನೇಹಿತರು ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಹೀಗೆ ಎಲ್ಲ ಉಚಿತವಾಗಿ ನೀಡಿದರೆ ಮೂಲಸೌಕರ್ಯ ಯೋಜನೆಗಳಿಗೆ ಹಣ ಎಲ್ಲಿದೆ? ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರ ಬಲಪಡಿಸಲು ಹಣ ಬೇಕು. ಸಿದ್ದರಾಮಯ್ಯ ಅವರು ಅತ್ಯುತ್ತಮ ಹಣಕಾಸು ಸಚಿವರು. ಆದರೆ, ಅವರ ಬಳಿ ಹಣವಿಲ್ಲ. ಶಾಸಕರಿಗೆ ಅನುದಾನ ಕೊಡಲು ಸಾಧ್ಯವಾಗದಂತಹ ಸ್ಥಿತಿ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.