ಬಸವಜಯ ಮೃತ್ಯುಂಜಯ ಸ್ವಾಮೀಜಿ
ಬೆಳಗಾವಿ: ‘ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ ‘2ಎ’ ಮತ್ತು ಲಿಂಗಾಯತ ಉಪ ಪಂಗಡಗಳಿಗೆ ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ, ಜ.14ರಂದು ಬೆಳಿಗ್ಗೆ 11ಕ್ಕೆ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ಪಂಚಮಸಾಲಿ ಪೀಠದಿಂದ ಎಂಟನೇ ಹಂತದ ಹೋರಾಟಕ್ಕೆ ಚಾಲನೆ ಕೊಡಲಾಗುವುದು’ ಎಂದು ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ನಡೆದಾಗ, ಸರ್ಕಾರದ ಕುಮ್ಮಕ್ಕಿನಿಂದ ಪೊಲೀಸರು ನಮ್ಮ ಮೇಲೆ ಲಾಠಿಚಾರ್ಜ್ ಮಾಡಿದರು. ಲಾಠಿಚಾರ್ಜ್ ವೇಳೆ ಗಾಯಗೊಂಡ ಹೋರಾಟಗಾರರಿಗೆ ‘ಲಿಂಗಾಯತ ಪಂಚಮಸಾಲಿ ಮೀಸಲಾತಿ ವೀರ’ ಎಂಬ ಬಸವರಕ್ಷೆ ಕೊಡುತ್ತೇವೆ’ ಎಂದರು.
‘ಈ ಸಲ ರಾಜ್ಯದಾದ್ಯಂತ ಹಳ್ಳಿ–ಹಳ್ಳಿಗಳಲ್ಲಿ ‘ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನ’ ಮಾಡುತ್ತೇವೆ. ಜನರ ಬಳಿ ಹೋಗಿ ಅಭಿಪ್ರಾಯ ಸಂಗ್ರಹಿಸಿ, ನಮ್ಮ ಗುರಿ ಸಾಧಿಸುತ್ತೇವೆ. ಪಂಚಮಸಾಲಿ ಸಮುದಾಯದವರು ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.
‘ನಿಮ್ಮ ಸಮುದಾಯದ ಕೆಲವು ನಾಯಕರಿಂದಲೇ ಬೆಂಬಲ ಸಿಗುತ್ತಿಲ್ಲ ಏಕೆ’ ಎಂಬ ಪ್ರಶ್ನೆಗೆ, ‘ಹೋರಾಟಕ್ಕೆ ಮೋಸ ಮಾಡಿದವರಿಗೆ ನಾವೇನೂ ಹೇಳುವುದಿಲ್ಲ. ಸಮುದಾಯದ ಜನರೇ ಅವರಿಗೆ ಪಾಠ ಕಲಿಸುತ್ತಾರೆ’ ಎಂದರು.
‘ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಫೆ.12ರಂದು ನೆರವೇರಿಸಲಾಗುವುದು’ ಎಂದೂ ಸ್ವಾಮೀಜಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.