ADVERTISEMENT

ನಮ್ಮವರಿಂದಲೇ ನಿರ್ಲಕ್ಷ್ಯ: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 21:57 IST
Last Updated 27 ಫೆಬ್ರುವರಿ 2021, 21:57 IST

ಬೆಂಗಳೂರು: ‘ಸರ್ಕಾರದಲ್ಲಿರುವ ನಮ್ಮವರೇ ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ಪಂಚಮಸಾಲಿ ಲಿಂಗಾಯತರಿಗೆ ಪ್ರವರ್ಗ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಏಳು ದಿನ ಪೂರೈಸಿದರೂ ಯಾವ ಸಚಿವರೂ ಸ್ಥಳಕ್ಕೆ ಬಂದಿಲ್ಲ’ ಎಂದು ಪಂಚಮಸಾಲಿ ಸಮುದಾಯದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರವೂ ಧರಣಿ ಮುಂದುವರಿಯಿತು. ಈ ಸಂದರ್ಭದಲ್ಲಿ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ಜಿಲ್ಲೆಯ ಸಮುದಾಯದ ಹಲವು ಮುಖಂಡರು, ರಾಜಕೀಯ ನಾಯಕರು ಪಾಲ್ಗೊಂಡಿದ್ದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ‘ಧರಣಿ ಸತ್ಯಾಗ್ರಹ ಆರಂಭವಾಗಿ ವಾರವೇ ಆಯಿತು. ಆದರೂ ಸರ್ಕಾರದ ಪ್ರತಿನಿಧಿಗಳು ಸ್ಥಳಕ್ಕೆ ಬಂದು ಮನವಿ ಆಲಿಸಿಲ್ಲ. ನಮ್ಮ ಸಮುದಾಯದ ಸಚಿವರೇ ನಿರ್ಲಕ್ಷಿಸುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

ಸರ್ಕಾರದ ಮೇಲೆ ಒತ್ತಡ ತನ್ನಿ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ನಮ್ಮ ಸಮುದಾಯದ ಎಲ್ಲ ಶಾಸಕರೂ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ನಮ್ಮ ಹೋರಾಟಕ್ಕೆ ಶಕ್ತಿ ತುಂಬಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.