ADVERTISEMENT

ಮೀಸಲಾತಿ ಬೇಡಿಕೆಗೆ ಪಂಕ್ತಿಭೇದದ ಸಾಕ್ಷ್ಯ

ಹಿಂದುಳಿದ ವರ್ಗಗಳ ಆಯೋಗದಿಂದ ಪಂಚಮಸಾಲಿ ಅರ್ಜಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 20:31 IST
Last Updated 22 ಮಾರ್ಚ್ 2021, 20:31 IST

ಬೆಂಗಳೂರು: ದೇವಾಲಯಗಳು, ಮಠಗಳಲ್ಲಿ ಗರ್ಭಗುಡಿ ಪ್ರವೇಶಕ್ಕೆ ಅವಕಾಶ ಇಲ್ಲದಿರುವುದು ಹಾಗೂ ಮೇಲ್ಜಾತಿಯವರ ಜತೆ ಸಹಪಂಕ್ತಿ ಭೋಜನಕ್ಕೆ ಅವಕಾಶ ಇಲ್ಲದಿರುವುದನ್ನು ಪರಿಗಣಿಸಿ ತಮಗೆ ಹಿಂದುಳಿದ ವರ್ಗಗಳ ಪ್ರವರ್ಗ ‘2ಎ’ ಅಡಿಯಲ್ಲಿ ಮೀಸಲಾತಿ ನೀಡಬೇಕು ಎಂದು ಲಿಂಗಾಯತ ಪಂಚಮಸಾಲಿ ಸಮುದಾಯ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮುಂದೆ ಬೇಡಿಕೆ ಮಂಡಿಸಿದೆ.

ಪಂಚಮಸಾಲಿ ಸಮುದಾಯದ ಬೇಡಿಕೆ ಕುರಿತು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಸೋಮವಾರ ಬಹಿರಂಗ ವಿಚಾರಣೆ ನಡೆಯಿತು. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಪರವಾಗಿ ವಾದ ಮಂಡಿಸಿದ ವಕೀಲ ದಿನೇಶ್ ಪಾಟೀಲ, ಪಂಕ್ತಿಭೇದ ಮತ್ತು ಗರ್ಭಗುಡಿ ಪ್ರವೇಶಕ್ಕೆ ಅವಕಾಶ ನೀಡದಿರುವುದನ್ನು ಪ್ರಸ್ತಾಪಿಸಿದರು.

‘ಹೆಚ್ಚಿನ ದೇವಾಲಯಗಳು ಮತ್ತು ಮಠಗಳಲ್ಲಿ ಪಂಚಮಸಾಲಿ ಸಮುದಾಯದ ಜನರು ಇತರ ಮೇಲ್ಜಾತಿಯ ಜನರ ಜತೆಗೆ ಒಂದೇ ಪಂಕ್ತಿಯಲ್ಲಿ ಕುಳಿತು ಊಟ ಮಾಡಲು ಅವಕಾಶವಿಲ್ಲ. ದೇವಾಲಯಗಳ ಗರ್ಭಗುಡಿಗೆ ಪ್ರವೇಶವೇ ಇಲ್ಲ. ಇದು ನಮ್ಮ ಸಮುದಾಯ ಸಾಮಾಜಿಕವಾಗಿ ಶೋಷಣೆಗೊಳಗಾಗಿದೆ ಎಂಬುದನ್ನು ದೃಢೀಕರಿಸುತ್ತದೆ. ಈ ವಿಚಾರವನ್ನು ಪ್ರಬಲ ಆಧಾರವಾಗಿ ಪರಿಗಣಿಸಿ ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಮೈಸೂರು ಮಹಾರಾಜರು ನೇಮಿಸಿದ್ದ ಮಿಲ್ಲರ್‌ ಆಯೋಗದ ವರದಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ‘ದಲಿತರು’ ಎಂದು ಪರಿಗಣಿಸಲಾಗಿತ್ತು. ಮೀಸಲಾತಿ ಕಲ್ಪಿಸುವಾಗ ಆರ್ಥಿಕ ಅಂಶವನ್ನು ಪರಿಗಣಿಸಬೇಕು. ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನೇ ಆಧರಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ವಿಚಾರಣೆ ಮುಕ್ತಾಯವಾದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ದಿನೇಶ್ ಪಾಟೀಲ, ‘ಹಲವು ಅಂಶಗಳನ್ನು ಆಯೋಗದ ಗಮನಕ್ಕೆ ತರಲಾಗಿದೆ. ಪೂರಕ ಸಾಕ್ಷ್ಯಗಳನ್ನು ಮುಂದಿನ ವಿಚಾರಣೆ ವೇಳೆ ಒದಗಿಸಲಾಗುವುದು. 2002ರಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗಗಳ ಮರು ವರ್ಗೀಕರಣದ ಸಂದರ್ಭದಲ್ಲಿ ಆಯೋಗ ನೀಡಿದ್ದ 72 ಸಲಹೆಗಳನ್ನು ಸರ್ಕಾರ ಒಪ್ಪಿಕೊಂಡಲ್ಲಿ ಸಮಸ್ಯೆಗೆ ಪರಿಹಾರ ದೊರಕುತ್ತದೆ ಎಂಬುದನ್ನೂ ತಿಳಿಸಲಾಗಿದೆ’ ಎಂದರು.

ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಸಮುದಾಯದ ಪರವಾಗಿ ನಮ್ಮ ವಕೀಲರು ಪ್ರಬಲ ವಾದ ಮಂಡಿಸಿದ್ದಾರೆ. ಜನಸಂಖ್ಯೆ ಮತ್ತು ಆರ್ಥಿಕ ಆಧಾರದಲ್ಲಿ ಮೀಸಲಾತಿ ಕೇಳುತ್ತಿಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನೇ ಆಧರಿಸಿ ಮೀಸಲಾತಿ ಕೇಳುತ್ತಿದ್ದೇವೆ ಎಂಬುದನ್ನು ಆಯೋಗಕ್ಕೆ ಮನವರಿಕೆ ಮಾಡಲು ಯತ್ನಿಸಿದ್ದಾರೆ’ ಎಂದು ಹೇಳಿದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ‌ ಸೇರಿದಂತೆ ಸಮುದಾಯದ ಹಲವು ಮುಖಂಡರು ಆಯೋಗದ ವಿಚಾರಣೆ ವೇಳೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.