
ಪ್ರಿಯಾಂಕ್ ಖರ್ಗೆ
ಬೆಳಗಾವಿ (ಸುವರ್ಣ ವಿಧಾನಸೌಧ): ‘ದಶಕದಿಂದ ಜಟಿಲ ಸಮಸ್ಯೆಯಿಂದ ಬಾಕಿ ಉಳಿದಿದ್ದ ಜ್ಯೇಷ್ಠತಾ ಪಟ್ಟಿಯ ಪ್ರಕರಣವು ನ್ಯಾಯಾಲಯದಲ್ಲಿ ತಾರ್ಕಿಕವಾಗಿ ಬಗೆಹರಿದ ಪರಿಣಾಮ ಸಾವಿರಾರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ನ್ಯಾಯ ಸಿಕ್ಕಿದೆ. ಅಲ್ಲದೆ, ಕಾರ್ಯದರ್ಶಿ, ನೀರುಗಂಟಿ, ಬಿಲ್ ಕಲೆಕ್ಟರ್‌ಗಳ ಪದೋನ್ನತಿಗೂ ಸಹಕಾರಿ ಆಗಲಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಬಗ್ಗೆ ‘ಎಕ್ಸ್’ ಮಾಡಿರುವ ಅವರು, ‘ಇಚ್ಛಾಶಕ್ತಿಯ ಕೊರತೆಯಿಂದ ಜ್ಯೇಷ್ಠತಾ ಪಟ್ಟಿಯ ಪ್ರಕರಣವು ಕಗ್ಗಂಟಾಗಿ ನ್ಯಾಯಾಲಯದಲ್ಲಿತ್ತು. ನಮ್ಮ ಸರ್ಕಾರದ ಪ್ರಾಮಾಣಿಕ ಪ್ರಯತ್ನ ಮತ್ತು ವಿಶೇಷ ಆಸಕ್ತಿಯಿಂದ ಈ ಪ್ರಕರಣವನ್ನು ಸಕಾರಾತ್ಮಕವಾಗಿ ಬಗೆಹರಿಸಲು ಸಾಧ್ಯವಾಗಿದೆ’ ಎಂದಿದ್ದಾರೆ.
‘ಪಂಚಾಯತ್ ರಾಜ್ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಾಗ ಇಲಾಖೆಯಲ್ಲಿನ ಪಿಡಿಒ ಜ್ಯೇಷ್ಠತಾ ಪಟ್ಟಿಯ ಪ್ರಕರಣವು ಸವಾಲಿನಂತೆ ಎದುರಿಗಿತ್ತು. ಅದನ್ನು ಬಗೆಹರಿಸಲೇಬೇಕು ಎಂಬ ದೃಷ್ಟಿಯಿಂದ 15ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ, ಪ್ರಕರಣದ ಮೇಲ್ವಿಚಾರಣೆ ನಡೆಸಲಾಗಿತ್ತು. ಈ ಸಮಸ್ಯೆಗೆ ಕಾಲಮಿತಿಯಲ್ಲಿ ಪರಿಹಾರ ಕಂಡುಕೊಳ್ಳಲು ನಿರ್ದೇಶಿಸಲಾಗಿತ್ತು. ಅದರನ್ವಯ ನ್ಯಾಯಾಲಯದ ತೀರ್ಪು ಕೂಡಾ ಸುಮಾರು 2 ಸಾವಿರ ಪಿಡಿಒಗಳಿಗೆ ನ್ಯಾಯ ಒದಗಿಸಿದೆ ಮತ್ತು ಇಲಾಖೆಯ ಆಡಳಿತಾತ್ಮಕ ವಿಷಯಗಳಿಗೆ ಪೂರಕವಾಗಿದೆ’ ಎಂದಿದ್ದಾರೆ.
‘ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎಂಬ ನಮ್ಮ ಸಂಕಲ್ಪಕ್ಕೆ ಯಶಸ್ಸು ದೊರಕಿದೆ. ನ್ಯಾಯಾಲಯದ ಈ ಮಹತ್ವದ ತೀರ್ಪಿನಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪದೋನ್ನತಿಯು ಸರಾಗವಾಗಿದೆ’ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.