ADVERTISEMENT

ತುಂಗಭದ್ರೆಗೆ ಸಮಾನಾಂತರ ಜಲಾಶಯ | ತೆಲಂಗಾಣ, ಆಂಧ್ರ ಸಿಎಂಗಳ ಜತೆ ಚರ್ಚೆ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 14:38 IST
Last Updated 13 ಮಾರ್ಚ್ 2025, 14:38 IST
   

ಬೆಂಗಳೂರು: ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರವಾಗಿ ₹15,601 ಕೋಟಿ ವೆಚ್ಚದಲ್ಲಿ ಮತ್ತೊಂದು ಅಣೆಕಟ್ಟೆ ನಿರ್ಮಿಸಲು ಸಿದ್ಧತೆ ನಡೆಯುತ್ತಿದ್ದು, ತೆಲಂಗಾಣ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಕಾಂಗ್ರೆಸ್‌ನ ಬಸನಗೌಡ ಬಾದರ್ಲಿ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳಿನಿಂದ ನೀರಿನ ಸಂಗ್ರಹ ಕಡಿಮೆಯಾಗಿದೆ. 132 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯ 100 ಟಿಎಂಸಿ ಅಡಿಗೆ ಇಳಿದೆ. ಈ ಕೊರತೆ ನೀಗಿಸಲು ಕೊಪ್ಪಳ ಜಿಲ್ಲೆಯ ನವಲಿ ಹತ್ತಿರ ಸಮತೋಲನ ಜಲಾಶಯ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದರು.

ಯೋಜನಾ ವೆಚ್ಚ ಒಳಗೊಂಡ ವಿವರವಾದ ವರದಿಯನ್ನು ತುಂಗಭದ್ರಾ ಮಂಡಳಿಗೆ ಈಗಾಗಲೇ ಸಲ್ಲಿಸಲಾಗಿದೆ. ಅಂತರರಾಜ್ಯ ಯೋಜನೆಯಾದ ಕಾರಣ ತೆಲಂಗಾಣ, ಆಂಧ್ರ ಪ್ರದೇಶಗಳ ಜತೆ ಚರ್ಚಿಸಲು ಸಮಯ ಕೋರಿ ಪತ್ರ ಬರೆಯಲಾಗಿದೆ ಎಂದು ವಿವರ ನೀಡಿದರು.

ADVERTISEMENT

ಕೃಷ್ಣಾ: ಸ್ವಾಧೀನ ಬಾಕಿ 1.04 ಲಕ್ಷ ಎಕರೆ

ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಗೆ 1.04 ಲಕ್ಷ ಎಕರೆ, 566 ಕಟ್ಟಡಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಬಾಕಿ ಇದೆ ಶಿವಕುಮಾರ್ ಹೇಳಿದರು.

ಬಿಜೆಪಿಯ ಹಣಮಂತ ನಿರಾಣಿ, ಪಿ.ಎಚ್‌. ಪೂಜಾರ್ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಹಿಂದೆ ನಡೆದ ಸಭೆಯ ನಿರ್ಣಯ, ಐತೀರ್ಪಿನ ಪರಿಷ್ಕರಣೆ ಹಾಗೂ ಯೋಜನೆಯ ಪರಿಷ್ಕೃತ ಅಂದಾಜು ಪ್ರಸ್ತಾವನೆಗಳ ಅನುಮೋದನೆಗಾಗಿ ಸಚಿವ ಸಂಪುಟದ ಮುಂದೆ ಮಂಡಿಸಲು ಸಿದ್ಧತೆ ನಡೆದಿದೆ ಎಂದು ಅವರು
ತಿಳಿಸಿದರು.

ನೀರು ಬಳಕೆದಾರರಿಗೆ ‘ಅಪೆಕ್ಸ್‌’  

ನೀರು ಬಳಕೆದಾರರ ಸಹಕಾರ ಸಂಘಗಳ ರಾಜ್ಯಮಟ್ಟದ ಶೃಂಗ ಮಹಾಮಂಡಲ (ಅಪೆಕ್ಸ್‌) ರಚನೆ ಪ್ರಕ್ರಿಯೆ ಆರಂಭವಾಗಿದ್ದು, ಮುಖ್ಯ ಪ್ರವರ್ತಕರನ್ನು ನೇಮಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಕಾಂಗ್ರೆಸ್‌ನ ಮಧು ಮಾದೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ನೀರಾವರಿ ಬಳಕೆದಾರರ ಸಂಘಗಳ ನಿರ್ವಹಣೆಗಾಗಿ ಈಗ ನೀಡುತ್ತಿರುವ ವಾರ್ಷಿಕ ಅನುದಾನ ₹1 ಲಕ್ಷ ಮೊತ್ತವನ್ನು ₹2 ಲಕ್ಷಕ್ಕೆ ಹೆಚ್ಚಿಸಲಾಗಿದೆ. ನಿರ್ವಹಣಾ ಕಾಮಗಾರಿಗಳನ್ನು ಸಂಘಗಳಿಗೆ ವಹಿಸುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.