ADVERTISEMENT

ಹರಿಪ್ರಸಾದ್ ಭೇಟಿಯಾದ ಪರಮೇಶ್ವರ, ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2023, 16:18 IST
Last Updated 14 ಸೆಪ್ಟೆಂಬರ್ 2023, 16:18 IST
ಗೃಹ ಸಚಿವ ಜಿ. ಪರಮೇಶ್ವರ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಬಿ.ಕೆ. ಹರಿಪ್ರಸಾದ್ ಅವರ ನಿವಾಸಕ್ಕೆ ನೀಡಿ ಚರ್ಚಿಸಿದರು.
ಗೃಹ ಸಚಿವ ಜಿ. ಪರಮೇಶ್ವರ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಬಿ.ಕೆ. ಹರಿಪ್ರಸಾದ್ ಅವರ ನಿವಾಸಕ್ಕೆ ನೀಡಿ ಚರ್ಚಿಸಿದರು.   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯುತ್ತಿರುವ ವಿಧಾನಪರಿಷತ್ತಿನ ಸದಸ್ಯ ಬಿ.ಕೆ. ಹರಿಪ್ರಸಾದ್ ನಿವಾಸಕ್ಕೆ ಗುರುವಾರ ಸಂಜೆ ಭೇಟಿ ನೀಡಿದ ಗೃಹ ಸಚಿವ ಜಿ. ಪರಮೇಶ್ವರ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಒಂದು ಗಂಟೆಗೂ ಹೆಚ್ಚು ಮಾತುಕತೆ ನಡೆಸಿದ್ದಾರೆ.

ಈಡಿಗ ಮತ್ತು ಇತರ ಅತಿ ಹಿಂದುಳಿದವರ ಸಮಾವೇಶದಲ್ಲಿ ಮಾತನಾಡಿದ್ದ ಹರಿಪ್ರಸಾದ್‌ ಅವರು ಸಿದ್ದರಾಮಯ್ಯ ಅವರನ್ನು ವೈಯಕ್ತಿಕ ನೆಲೆಯಲ್ಲಿ ಟೀಕಿಸಿದ್ದರು. ಇದು ಪಕ್ಷದಲ್ಲಿ ಚರ್ಚೆಗೆ ಕಾರಣವಾಗಿತ್ತು. ಹಲವು ಸಚಿವರು ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದಲ್ಲದೇ, ಹರಿಪ್ರಸಾದ್ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಹರಿಪ್ರಸಾದ್‌ ಅವರ ಹೇಳಿಕೆ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ತಂದಿತ್ತು. ಈ ಬಗ್ಗೆ ಪಕ್ಷದ ವರಿಷ್ಠರಿಗೆ ಸ್ವತಃ ಸಿದ್ದರಾಮಯ್ಯನವರೇ ದೂರಿತ್ತಿದ್ದರು. ಈ ಬೆನ್ನಲ್ಲೇ, ಸೋನಿಯಾಗಾಂಧಿ ಅವರ ಸೂಚನೆ ಮೇರೆಗೆ ಹರಿಪ್ರಸಾದ್‌ಗೆ ನೋಟಿಸ್ ನೀಡಲಾಗಿತ್ತು.

ADVERTISEMENT

ಈಡಿಗ ಮತ್ತು ಅತಿ ಹಿಂದುಳಿದವರ ಸಮಾವೇಶವನ್ನು ರಾಜ್ಯದ ಅನೇಕ ಕಡೆ ನಡೆಸಲು ಹರಿಪ್ರಸಾದ್ ತಯಾರಿ ನಡೆಸಿದ್ದರು. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಹೊತ್ತಿನಲ್ಲಿ, ಪಕ್ಷದಲ್ಲಿ ಭಿನ್ನಮತ ಇದೆ ಎಂದು ಬಿಂಬಿಸಿಕೊಳ್ಳುವ ಇಂತಹ ಕಾರ್ಯಕ್ರಮ, ಪಕ್ಷದ ವರ್ಚಸ್ಸಿಗೆ ಧಕ್ಕೆ ತರಲಿದೆ ಎಂಬ ಚರ್ಚೆ ಪಕ್ಷದಲ್ಲಿ ನಡೆದಿತ್ತು.

ಹರಿಪ್ರಸಾದ್ ಭೇಟಿ ಮಾಡಿದ ಪರಮೇಶ್ವರ ಮತ್ತು ಜಾರಕಿಹೊಳಿ ಅವರು ಪಕ್ಷಕ್ಕೆ ಮುಜುಗರ ತರುವ ಇಂತಹ ಕಾರ್ಯಕ್ರಮಗಳನ್ನು ನಡೆಸದಂತೆ ಮನವೊಲಿಸುವ ಯತ್ನ ನಡೆಸಿದರು. ‘ನಿಮ್ಮಂತಹ ಹಿರಿಯ ನಾಯಕರೇ ಈ ರೀತಿ ಮಾಡಿದರೆ, ಕಿರಿಯರಿಗೆ ಹೇಳಲಾಗದು. ಎಲ್ಲವನ್ನೂ ಮಾತುಕತೆ ಮೂಲಕ ಬಗೆಹರಿಸಿಕೊಂಡು ಒಟ್ಟಾಗಿ ಹೋಗೋಣ ಎಂದು ಮನವರಿ ಮಾಡಿಕೊಡಲು ಯತ್ನಿಸಿದರು’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.