ADVERTISEMENT

ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರ, ಪಾತಕಿ ಕೈಯಲ್ಲಿ ಸ್ಮಾರ್ಟ್‌ ಫೋನ್‌!

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 15:49 IST
Last Updated 8 ನವೆಂಬರ್ 2025, 15:49 IST
<div class="paragraphs"><p>ಜೈಲಿನ ಬ್ಯಾರಕ್‌ನಲ್ಲಿ&nbsp;ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಹಾಗೂ&nbsp;ಅತ್ಯಾಚಾರ ನಡೆಸಿ ಸರಣಿ ಕೊಲೆ ಮಾಡಿದ್ದ ಅಪರಾಧಿ ಉಮೇಶ್ ರೆಡ್ಡಿ ಮೊಬೈಲ್‌ನಲ್ಲಿ ಮಾತುಕತೆ ನಡೆಸುತ್ತಿದ್ದ ದೃಶ್ಯ&nbsp;&nbsp;</p><p></p></div>

ಜೈಲಿನ ಬ್ಯಾರಕ್‌ನಲ್ಲಿ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ ಹಾಗೂ ಅತ್ಯಾಚಾರ ನಡೆಸಿ ಸರಣಿ ಕೊಲೆ ಮಾಡಿದ್ದ ಅಪರಾಧಿ ಉಮೇಶ್ ರೆಡ್ಡಿ ಮೊಬೈಲ್‌ನಲ್ಲಿ ಮಾತುಕತೆ ನಡೆಸುತ್ತಿದ್ದ ದೃಶ್ಯ  

   

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಸಜಾ ಬಂದಿಗಳು ಹಾಗೂ ವಿಚಾರಣಾಧೀನ ಕೈದಿಗಳಿಗೆ ಜೈಲಿನಲ್ಲಿ ಸಕಲ ಸೌಲಭ್ಯ ದೊರೆಯುತ್ತಿರುವುದಕ್ಕೆ ಸಾಕ್ಷಿಯಾಗಿ ಫೋಟೊ, ವಿಡಿಯೊಗಳು ಲಭ್ಯವಾಗಿವೆ.

ADVERTISEMENT

ಶಿಕ್ಷೆಗೆ ಗುರಿಯಾಗಿ ಜೈಲುವಾಸ ಅನುಭವಿಸುತ್ತಿರುವ ಉಗ್ರ ಸಂಘಟನೆಗಳ ಮುಖಂಡರು, ಕೊಲೆ ಹಾಗೂ ಅತ್ಯಾಚಾರ ಪ್ರಕರಣದ ಅಪರಾಧಿಗಳು, ಚಿನ್ನ ಸಾಗಣೆ ಪ್ರಕರಣದ ಆರೋಪಿಗಳಿಗೆ ಜೈಲಿನ ಸಿಬ್ಬಂದಿಯೇ ವಿಶೇಷ ಸೌಲಭ್ಯ ಕಲ್ಪಿಸುತ್ತಿದ್ದಾರೆ ಎಂಬ ಆರೋಪವಿತ್ತು. ಆ ಆರೋಪಕ್ಕೆ ಪುರಾವೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವು ಫೋಟೊ ಹಾಗೂ ವಿಡಿಯೊಗಳು ಹರಿದಾಡುತ್ತಿವೆ. ಕೈದಿಗಳು ವಿಲಾಸಿ ಜೀವನ ನಡೆಸುತ್ತಿರುವುದು ದೃಢಪಟ್ಟಿದೆ.

ಅತ್ಯಾಚಾರ ನಡೆಸಿ ಸರಣಿ ಕೊಲೆ ಮಾಡಿದ್ದ ಅಪರಾಧಿ ಉಮೇಶ್ ರೆಡ್ಡಿ, ಲಷ್ಕರ್ –ಎ–ತಯಬಾ ಸಂಘಟನೆಯ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ, ದುಬೈನಿಂದ ಚಿನ್ನ ಕಳ್ಳ ಸಾಗಣೆ ಪ್ರಕರಣದ ಆರೋಪಿ ತರುಣ್ ರಾಜ್‌ ಇರುವ ಬ್ಯಾರಕ್‌ನಲ್ಲಿ ಮೊಬೈಲ್ ಫೋನ್ ಹಿಡಿದುಕೊಂಡು ತಮ್ಮ ಸಹಚರರು ಹಾಗೂ ಸಂಬಂಧಿಕರ ಜತೆಗೆ ಮಾತುಕತೆ ನಡೆಸುತ್ತಿರುವ ವಿಡಿಯೊಗಳು ಹರಿದಾಡುತ್ತಿವೆ.

ಈ ಮೂವರಿಗೆ ನೀಡಲಾಗಿರುವ ಹೆಚ್ಚಿನ ಭದ್ರತೆಯುಳ್ಳ ಬ್ಯಾರಕ್‌ನಲ್ಲಿ ಎಲ್‌ಇಡಿ ಟಿ.ವಿ ವ್ಯವಸ್ಥೆ ಸಹ ಮಾಡಿರುವುದು ಬಹಿರಂಗವಾಗಿದೆ.

ಹಮೀದ್ ಶಕೀಲ್ ಮನ್ನಾ ಎಂಬಾತನಿಗೂ ವಿಶೇಷ ಆತಿಥ್ಯ ದೊರೆಯುತ್ತಿದೆ. ಈತ ಯುವಕರ ಮನಪರಿವರ್ತನೆ ಮಾಡಿ ಭಯೋತ್ಪಾದನಾ ಚಟುವಟಿಕೆಗೆ ಸೆಳೆಯುತ್ತಿದ್ದ. ಅಲ್ಲದೇ ಉಗ್ರ ಸಂಘಟನೆಗೂ ನೇಮಕ ಮಾಡಿಕೊಳ್ಳುತ್ತಿದ್ದ. ಜೈಲಿನೊಳಗೆ ಮನ್ನಾಗೂ ಸ್ಮಾರ್ಟ್ ಫೋನ್ ಸಿಕ್ಕಿದೆ. ಈತ ಜೈಲಿನಲ್ಲೇ ಫೋನ್‌ ಬಳಕೆ ಮಾಡುತ್ತಿರುವುದು ದೃಢಪಟ್ಟದೆ. ₹5 ಸಾವಿರ ಕಳುಹಿಸುವುದಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿಯ ಜತೆಗೆ ಉಗ್ರ ಚರ್ಚೆ ನಡೆಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡಿದ್ದ ಪ್ರಕರಣದಲ್ಲಿ ನಟಿ ರನ್ಯಾರಾವ್‌ ಅವರನ್ನು ಬಂಧಿಸಲಾಗಿತ್ತು. ಅದೇ ಪ್ರಕರಣದಲ್ಲಿ ತರುಣ್‌ ರಾಜ್‌ನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಕೆಲವು ತಿಂಗಳ ಹಿಂದೆ ಬಂಧಿಸಿದ್ದರು. ಆತನಿಗೂ ಜೈಲಿನ ಒಳಗೆ ವಿಶೇಷ ಸೌಲಭ್ಯಗಳು ದೊರೆಯುತ್ತಿವೆ. ತರುಣ್‌ ಸಹ ತನ್ನ ಬ್ಯಾರಕ್‌ನಿಂದಲೇ ಆತ್ಮೀಯರ ಜತೆಗೆ ಮಾತನಾಡುತ್ತಾ ಜೈಲಿನಲ್ಲಿ ದಿನ ಕಳೆಯುತ್ತಿರುವುದು ಗೊತ್ತಾಗಿದೆ.

‘ಮೂವರಿಗೆ ಯಾರು ಮೊಬೈಲ್‌ ಪೂರೈಸಿದ್ದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಯಾರ ಜತೆಗೆ ಅವರು ಸಂಪರ್ಕದಲ್ಲಿದ್ದರು ಎಂಬುದನ್ನೂ ಪತ್ತೆ ಹಚ್ಚಲಾಗುವುದು. ಬ್ಯಾರಕ್‌ಗಳನ್ನು ಪರಿಶೀಲನೆ ನಡೆಸಿ ಮೊಬೈಲ್‌ ವಶಕ್ಕೆ ಪಡೆದುಕೊಳ್ಳಲಾಗಿದೆ. ತಪ್ಪಿತಸ್ಥ ಸಿಬ್ಬಂದಿಯ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಕಾರಾಗೃಹ ಇಲಾಖೆಯ ಮೂಲಗಳು ತಿಳಿಸಿವೆ.

‘ಉಗ್ರನಿಗೆ ದೊರೆಯುತ್ತಿರುವ ವಿಐಪಿ ಸೌಲಭ್ಯಗಳು ಮತ್ತು ಮೊಬೈಲ್ ಫೋನ್​ಗಳು ದೇಶದ ಭದ್ರತೆಗೆ ಗಂಭೀರ ಸವಾಲೊಡ್ಡಿದೆ. ತಪ್ಪಿತಸ್ಥ ಸಿಬ್ಬಂದಿಯ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು’ ಎಂದು ನಿವೃತ್ತ ಪೊಲೀಸ್‌ ಅಧಿಕಾರಿಯೊಬ್ಬರು ಆಗ್ರಹಿಸಿದರು.

‘ಜೈಲುಗಳಲ್ಲಿ ಕೈದಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡದಂತೆ ಸುಪ್ರೀಂ ಕೋರ್ಟ್ ಎಲ್ಲ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಈ ಆದೇಶವನ್ನು ಉಲ್ಲಂಘಿಸಿ ಕೈದಿಗಳಿಗೆ ವಿಶೇಷ ಆತಿಥ್ಯ ಕಲ್ಪಿಸಲಾಗುತ್ತಿದೆ’ ಎಂದು ಅವರು ಹೇಳಿದರು.

ತರುಣ್‌ ರಾಜ್‌ ಕೈಯಲ್ಲಿ ಮೊಬೈಲ್‌ 
ಕೈದಿಗಳಿಗೆ ವಿಶೇಷ ಆತಿಥ್ಯ ನೀಡಿರುವುದಕ್ಕೆ ಸಂಬಂಧಿಸಿದ ವಿಡಿಯೊಗಳು ಹರಿದಾಡುತ್ತಿವೆ. ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸೂಚಿಸುತ್ತೇನೆ
-ಸಿದ್ದರಾಮಯ್ಯ ಮುಖ್ಯಮಂತ್ರಿ

ಬ್ಯಾರಕ್‌ ಒಳಗೇ ಜನ್ಮದಿನಾಚರಣೆ

ಕೈದಿಗಳ ಜನ್ಮದಿನಾಚರಣೆಗೆ ಹೊರಗಿನಿಂದ ಕೇಕ್‌ ಹಾಗೂ ಸೇಬಿನ ಹಾರ ಬರುತ್ತಿರುವುದು ಇತ್ತೀಚೆಗೆ ಪತ್ತೆಯಾಗಿತ್ತು. ಆಗ ತನಿಖೆ ನಡೆಸಿ ಏಳು ಮಂದಿ ಜೈಲು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿತ್ತು. ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಗುಬ್ಬಚ್ಚಿ ಸೀನನ ಜನ್ಮದಿನವನ್ನು ಇತ್ತೀಚೆಗೆ ಜೈಲಿನ ಒಳಗೆ ಆಚರಣೆ ಮಾಡಲಾಗಿತ್ತು. ಆತನ ಸಹಚರರು ಗ್ರೂಪ್ ಫೋಟೊಶೂಟ್​ ನಡೆಸಿದ್ದರು. ಪಾರಿವಾಳ ಹಿಡಿದುಕೊಂಡು ಜೈಲಿನ ಒಳಗೆ ಫೋಟೊ ತೆಗೆಸಿಕೊಂಡಿದ್ದರು. ಜನ್ಮದಿನ ಆಚರಣೆಯ ಫೋಟೊಗಳನ್ನು ಗುಬ್ಬಚ್ಚಿ ಸೀನನ ಸಹಚರ ಕೊಲೆ ಆರೋಪಿ ಅರವಿಂದ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಜೈಲಿನ ಒಳಗಿಂದಲೇ ಫೋಟೊಗಳನ್ನು ಅಪ್‌ಲೋಡ್ ಮಾಡಿರುವುದು ತನಿಖೆಯಿಂದ ಗೊತ್ತಾಗಿತ್ತು. ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ಗೂ ವಿಶೇಷ ಆತಿಥ್ಯ ನೀಡಿದ್ದ ಫೋಟೊವೊಂದು ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಅಡುಗೆ ಮಾಡಿಕೊಳ್ಳಲು ಸ್ಟೌ ಪಾತ್ರೆ

ಕೈದಿಗಳಿಗೆ ಎಲ್‌ಇಡಿ ಟಿ.ವಿ ಸೌಲಭ್ಯದ ಜೊತೆಗೆ ಅಡುಗೆ ಮಾಡಿಕೊಳ್ಳಲು ಸ್ಟೌ ಪಾತ್ರೆಗಳೂ ಸಿಗುತ್ತಿವೆ. ಬ್ಯಾರಕ್‌ನಲ್ಲೇ ಪ್ರತ್ಯೇಕವಾಗಿ ಅಡುಗೆ ಮಾಡಿಕೊಳ್ಳಲು ಕೋಳಿ ಮಾಂಸವನ್ನೂ ಪೂರೈಸಲಾಗುತ್ತಿದೆ. ಪಾರ್ಟಿ ನಡೆಸಲು ಸ್ಪೀಕರ್ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ. ಹಣದಾಸೆಗೆ ಕೈದಿಗಳ ಜೊತೆ ಜೈಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಮೀಲಾಗಿದ್ದಾರೆ ಎಂಬ ಆರೋಪವಿದ್ದು ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.