ADVERTISEMENT

ಬೆಳಗಾವಿ ಜಿಲ್ಲಾ ಜೆಡಿಎಸ್‌ ಘಟಕದಲ್ಲಿ ‘ಪಾರ್ಟಿ ಫಂಡ್‌’ ಗದ್ದಲ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 12:01 IST
Last Updated 16 ಡಿಸೆಂಬರ್ 2019, 12:01 IST
   

ಬೆಳಗಾವಿ: ‘ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರೂ ಆಗಿರುವ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಅವರು ಪಾರ್ಟಿ ಫಂಡ್‌ ತಲುಪಿಸದೇ ನನಗೆ ಅನ್ಯಾಯ ಮಾಡಿದ್ದಾರೆ’ ಎಂದು ಆರೋಪಿಸಿ ಕಾಗವಾಡ ಕ್ಷೇತ್ರದ ಪರಾಜಿತ ಜೆಡಿಎಸ್‌ ಅಭ್ಯರ್ಥಿ ಶ್ರೀಶೈಲ ತುಗಶೆಟ್ಟಿ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಕ್ಷದ ವರಿಷ್ಠ ಎಚ್‌.ಡಿ. ದೇವೇಗೌಡ ಅವರನ್ನು ಉದ್ದೇಶಿಸಿ ಮಾತನಾಡಿರುವ ಅವರು, ಗಂಭೀರ ಆರೋಪ ಮಾಡಿದ್ದಾರೆ.

‘ನಾನು ಸ್ಪರ್ಧಿಸುವ ಮುನ್ನ ಎಚ್‌.ಡಿ. ಕುಮಾರಸ್ವಾಮಿ ₹ 4 ಕೋಟಿ ‘ಪಾರ್ಟಿ ಫಂಡ್‌’ ಕೊಡುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಶಂಕರ ಮಾಡಲಗಿ ನನ್ನನ್ನು ಕರೆದೊಯ್ದು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿಸಿದ್ದರು. ಅವರು ₹ 1 ಕೋಟಿ ಕಳುಹಿಸಿದ್ದಾರೆ ಎನ್ನುವ ಮಾಹಿತಿ ಬಂದಿದೆ. ಆದರೆ, ಮಾಡಲಗಿ ನನಗೆ ₹ 40 ಲಕ್ಷ ಮಾತ್ರ ತಲುಪಿಸಿದ್ದಾರೆ. ಇಂತಹ ಮೋಸಗಾರನನ್ನು ‍ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಇಟ್ಟಕೊಂಡರೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ತುಂಬಲಾರದ ಹಾನಿಯಾಗುತ್ತದೆ. ಅವರನ್ನು ದೂರವಿಡಬೇಕು’ ಎಂದು ಕೋರಿದ್ದಾರೆ.

ADVERTISEMENT

ಈ ಕುರಿತು ಸ್ಪಷ್ಟನೆ ನೀಡಿರುವ ಮಾಡಲಗಿ, ‘ಶ್ರೀಶೈಲ ಅವರು ಸೋಲಿನ ಹತಾಶೆಯಿಂದ ಈ ರೀತಿಯ ಆರೋಪ ಮಾಡುತ್ತಿದ್ದಾರೆ. ಅವರು ದೂರಿರುವಂತೆ ಕುಮಾರಸ್ವಾಮಿ ಅವರೊಂದಿಗೆ ಹಣಕಾಸಿನ ವ್ಯವಹಾರ ನಡೆದಿಲ್ಲ. ನಾನು ಅವರಿಗೆ ಯಾವುದೇ ಹಣವನ್ನೂ ನೀಡಿಲ್ಲ. ನಮ್ಮ ಸರ್ಕಾರ ನೀಡಿದ ಜನಪರ ಕಾರ್ಯಕ್ರಮಗಳನ್ನು ತಿಳಿಸಿ ಜನರಿಂದ ಮತ ಕೇಳುವಂತೆ ಸೂಚಿಸಲಾಗಿತ್ತು’ ಎಂದು ತಿಳಿಸಿದ್ದಾರೆ.

‘ವೈಯಕ್ತಿಕ ತೇಜೋವಧೆ ಮಾಡಿರುವುದರಿಂದ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.