ADVERTISEMENT

KSRTC ಸ್ಲೀಪರ್ ಬಸ್‌ನಲ್ಲಿ ಮಹಿಳೆ ಸೀಟ್ ಮೇಲೆ ಮೂತ್ರ ಮಾಡಿದ ಪ್ರಯಾಣಿಕ!

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 13:15 IST
Last Updated 23 ಫೆಬ್ರುವರಿ 2023, 13:15 IST
ಘಟನೆ ನಡೆದಿರುವ ಬಸ್
ಘಟನೆ ನಡೆದಿರುವ ಬಸ್   

ಮಂಗಳೂರು: ವಿಜಯಪುರದಿಂದ ಮಂಗಳೂರಿಗೆ ಹೊರಟ್ಟಿದ್ದ KSRTC ರಾತ್ರಿ ಬಸ್‌ನಲ್ಲಿ ಪ್ರಯಾಣಿಕನೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಸೀಟ್‌ ಮೇಲೆ ಮೂತ್ರ ಮಾಡಿದ ಘಟನೆ ನಡೆದಿದೆ. ಆತನನ್ನು ಅಲ್ಲೇ ಇಳಿಸಲಾಗಿದೆ. ಈ ಬಗ್ಗೆ ದೂರು ದಾಖಲಾಗಿಲ್ಲ.

ಮಂಗಳವಾರ (ಫೆ.21)ರಂದು ವಿಜಯಪುರದಿಂದ ಹೊರಟಿದ್ದ ಎ.ಸಿ ರಹಿತ ಸ್ಲೀಪರ್ ಬಸ್‌ನಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸದೆ, ಹತ್ತಿದ್ದ ಪ್ರಯಾಣಿಕನೊಬ್ಬ ಮಂಗಳೂರು ಟಿಕೆಟ್ ಪಡೆದು, ಸೀಟ್‌ ನಂಬರ್ 29ರಲ್ಲಿ ಕುಳಿತಿದ್ದ.

‘ಎಂದಿನಂತೆ ಬಸ್‌ ಅನ್ನು ರಾತ್ರಿ 10.30ರ ಸುಮಾರಿಗೆ ಡಾಬಾವೊಂದರ ಬಳಿ ಊಟಕ್ಕೆ ನಿಲ್ಲಿಸಲಾಗಿತ್ತು. ಎಲ್ಲ ಪ್ರಯಾಣಿಕರು ಊಟಕ್ಕೆ ಇಳಿದಾಗ, ಸೀಟ್‌ ನಂಬರ್ 29ರಲ್ಲಿ ಕುಳಿತಿದ್ದ ವ್ಯಕ್ತಿ ಹಿಂದಿನಿಂದ ಎದ್ದು ಬಂದು, ಸೀಟ್‌ ನಂಬರ್‌ 3ರ ಮೇಲೆ ಮೂತ್ರ ಮಾಡಿದ್ದಾನೆ. ಈ ವೇಳೆ ಬಸ್‌ನಲ್ಲಿ ಯಾರೂ ಇರಲಿಲ್ಲ. ಕೆಳಗೆ ನಿಂತಿದ್ದ ಪ್ರಯಾಣಿಕರೊಬ್ಬರು ಇದನ್ನು ಗಮನಿಸಿ, ಚಾಲಕ–ನಿರ್ವಾಹಕರಿಗೆ ಮಾಹಿತಿ ನೀಡಿದ್ದಾರೆ’ ಎಂದು ಘಟನೆಯ ಕುರಿತು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದರು.

ADVERTISEMENT

‘ಮೂತ್ರ ಮಾಡಿರುವ ವ್ಯಕ್ತಿ ಮದ್ಯಸೇವನೆ ಮಾಡಿರುವುದು ಚಾಲಕ–ನಿರ್ವಾಹಕರು, ಪ್ರಯಾಣಿಕರ ಗಮನಕ್ಕೆ ಬಂದಿದೆ. ಆತ ಸ್ವಯಂ ನಿಯಂತ್ರಣ ಕಳೆದುಕೊಂಡು, ಸೀಟ್‌ ಮೇಲೆ ಮೂತ್ರ ಮಾಡಿರುವ ಸಾಧ್ಯತೆ ಇದೆ ಅಥವಾ ಕೆಳಗೆ ಇಳಿದ್ದೇನೆ ಎಂಬ ಭ್ರಮೆಯಲ್ಲೂ ಈ ಕೃತ್ಯ ಮಾಡಿರಬಹುದು. ಊಟ ಮುಗಿಸಿ ಬಂದ ಮೇಲೆ ಎಲ್ಲರೂ ಸೇರಿ ಆತನನ್ನು ಅಲ್ಲಿಯೇ ಇಳಿಸಿದ್ದಾರೆ. ಬಸ್ ಚಾಲಕ– ನಿರ್ವಾಹಕರು ಅದನ್ನು ಸ್ವಚ್ಛಗೊಳಿಸಿಕೊಂಡು, ಮುಂದೆ ಪ್ರಯಾಣ ಬೆಳೆಸಿದ್ದಾರೆ. ಸೀಟ್‌ ನಂಬರ್ 3ರಲ್ಲಿ ಹುಬ್ಬಳ್ಳಿಗೆ ಹೊರಟಿದ್ದ ಮಹಿಳೆಯೊಬ್ಬರು ಕುಳಿತಿದ್ದರು. ಡಾಬಾದ ಬಳಿ ಬಸ್ ನಿಂತಾಗ ಅವರು ಕೂಡ ಕೆಳಗೆ ಇಳಿದಿದ್ದರು. ಈ ಮಹಿಳೆ ಕೂಡ ಮುಂಗಡ ಸೀಟ್ ಕಾಯ್ದಿರಿಸದೆ, ಟಿಕೆಟ್ ಪಡೆದು, ಪ್ರಯಾಣಿಸಿದವರು. ನಂತರ ಅವರಿಗೆ ಬಸ್‌ನಲ್ಲಿ ಬೇರೆ ಸೀಟ್ ಒದಗಿಸಲಾಗಿದ್ದು, ಅವರು ಹುಬ್ಬಳ್ಳಿಯವರೆಗೆ ಇದೇ ಬಸ್‌ನಲ್ಲಿ ಪ್ರಯಾಣಿಸಿದ್ದಾರೆ’ ಎಂದು ಅವರು ‘ಪ್ರಜಾವಾಣಿ’ಗೆ ವಿವರ ನೀಡಿದರು.

‘ಮೂತ್ರ ಮಾಡಿರುವ ವ್ಯಕ್ತಿಗೆ ಆ ಸೀಟ್‌ನಲ್ಲಿ ಮಹಿಳೆ ಪ್ರಯಾಣಿಸುವ ವಿಷಯ ಗೊತ್ತಿರುವ ಸಾಧ್ಯತೆ ಇಲ್ಲ. ಆದರೆ, ಮಹಿಳೆಯ ಮೇಲೆ ಆತ ಮೂತ್ರ ಮಾಡಿದ್ದಾನೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಲಾಗಿದೆ. ಟಿಕೆಟ್ ಪಡೆದು ಪ್ರಯಾಣಿಸಿದ ವ್ಯಕ್ತಿಯನ್ನು ಡಾಬಾ ಬಳಿಯೇ ಇಳಿಸಿದ್ದರಿಂದ ಆತ ಯಾರೆಂಬ ಮಾಹಿತಿ ಕೂಡ ಲಭ್ಯವಾಗಿಲ್ಲ. ಬಸ್ ಹುಬ್ಬಳ್ಳಿ ತಲುಪುವಾಗ ಅರ್ಧ ಗಂಟೆ ತಡವಾದ್ದರಿಂದ, ಬಸ್ ನಿಲ್ದಾಣದ ಅಧಿಕಾರಿ ವಿಚಾರಿಸಿದಾಗ, ಚಾಲಕ–ನಿರ್ವಾಹಕರು ನಡೆದ ಘಟನೆಯನ್ನು ವಿವರಿಸಿದ್ದಾರೆ’ ಎಂದು ಅವರು ಹೇಳಿದರು.

‘ಕೆಎ 19 ಎಫ್‌ 3554 ಸಂಖ್ಯೆಯ ಈ ಬಸ್ಸು ಮಂಗಳೂರು ಡಿಪೊ–2ಕ್ಕೆ ಸೇರಿದ್ದು, ಬಸ್‌ ಚಾಲಕ ಸಂತೋಷ ಮಠಪತಿ ಮತ್ತು ನಿರ್ವಾಹಕ ಉಮೇಶ ಕರಡಿ ಅವರು ಸಂಸ್ಥೆಯ ಅಧಿಕಾರಿಗಳಿಗೆ ವಿವರಣೆ ನೀಡಿದ್ದಾರೆ. ಹುಬ್ಬಳ್ಳಿ ಬಳಿಯ ಕಿರೇಸೂರು ಡಾಬಾ ಬಳಿ ಊಟಕ್ಕೆ ನಿಲ್ಲಿಸಿದ್ದಾಗ ಈ ಘಟನೆ ನಡೆದಿದೆ‘ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.