ADVERTISEMENT

ಲಾಕ್‌ಡೌನ್ ಸಂಕಷ್ಟ | ಸರ್ಕಾರಿ ನೌಕರರ ವೇತನ ಕಡಿತ?

ಜೂನ್‌ನಿಂದ ಸಂಬಳ ಕೊಡಲು ತತ್ವಾರ

​ಪ್ರಜಾವಾಣಿ ವಾರ್ತೆ
Published 13 ಮೇ 2020, 1:54 IST
Last Updated 13 ಮೇ 2020, 1:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಆದಾಯವಿಲ್ಲದೆ ಕಂಗೆಟ್ಟಿರುವ ರಾಜ್ಯ ಸರ್ಕಾರ ತನ್ನ ನೌಕರರಿಗೆ ಜೂನ್‌ನಿಂದ ಪೂರ್ಣ ಪ್ರಮಾಣದ ಸಂಬಳ ಪಾವತಿಸುವುದು ಅನುಮಾನ.

ಬೊಕ್ಕಸಕ್ಕೆ ಆದಾಯ ಬರದೇ ಸಂಕಷ್ಟ ಸ್ಥಿತಿ ಹೀಗೆ ಮುಂದುವರಿದರೆ ಮುಂಬರುವ ತಿಂಗಳುಗಳಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಬಳ ಕಡಿತ ಅನಿವಾರ್ಯ ಎಂದು ಹಣಕಾಸು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಹಣಕಾಸು ಇಲಾಖೆ ಅಧಿಕಾರಿಗಳ ವಿರೋಧವಿದ್ದರೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಒತ್ತಾಸೆಯ ಮೇರೆಗೆ ಏಪ್ರಿಲ್‌ ತಿಂಗಳು ಪೂರ್ತಿ ಸಂಬಳ ಪಾವತಿ ಮಾಡಲಾಗಿತ್ತು. ಮೇ ಸಂಬಳವನ್ನೂ ಕಷ್ಟಪಟ್ಟು ಹೊಂದಾಣಿಕೆ ಮಾಡಿ ಪಾವತಿಸಬಹುದು. ಆ ಬಳಿಕ ಪೂರ್ಣ ಸಂಬಳ ಪಾವತಿ ಮಾಡುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.

ADVERTISEMENT

ಅತ್ಯಂತ ಕಠಿಣ ಪರಿಸ್ಥಿತಿ ಇರುವುದರಿಂದ ಸಂಬಳವನ್ನು ಕಡಿತ ಮಾಡದೇ ಬೇರೆ ದಾರಿ ಇಲ್ಲ. ಸಂಬಳ ಮತ್ತು ವಿವಿಧ ಯೋಜನೆಗಳಿಗೆ ಸಾಲ ತರುವ ಸಲಹೆಗಳೂ ಕೇಳಿ ಬಂದಿದ್ದವು. ಆದರೆ, ಅಧಿಕ ಬಡ್ಡಿ ದರದಲ್ಲಿ ಸಾಲ ತಂದು, ಅದನ್ನು ಮರುಪಾವತಿ ಮಾಡುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಸಾಲ ತರುವುದಕ್ಕೆ ಸರ್ಕಾರ ಒಪ್ಪಿಕೊಂಡಿಲ್ಲ ಎಂದೂ ಮೂಲಗಳು ಹೇಳಿವೆ.

ಸರ್ಕಾರಕ್ಕೆ ವಾಣಿಜ್ಯ, ನೋಂದಣಿ ಮತ್ತು ಮುದ್ರಾಂಕ, ಮೋಟಾರು ವಾಹನ ತೆರಿಗೆ, ಅಬಕಾರಿ‌ ಮುಂತಾದವುಗಳಿಂದಲೇ ಹೆಚ್ಚಿನ ಆದಾಯ ಬರುತ್ತದೆ. ಈ ಕ್ಷೇತ್ರಗಳು ಗರಿಗೆದರದ ಹೊರತು ಬೊಕ್ಕಸ ತುಂಬುವುದಿಲ್ಲ ಎಂದು ಹೆಸರು ಬಹಿರಂಗಕ್ಕೆ ಒಪ್ಪದ ಹಣಕಾಸು ಇಲಾಖೆ ಯಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.