ADVERTISEMENT

ಪ್ರಶ್ನೆಪತ್ರಿಕೆ ಸೋರಿಕೆ ಆತಂಕ: ವಾಹನಗಳಿಗೆ ಜಿಪಿಎಸ್

ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆ ಜ. 27ರಂದು * ರಾಜ್ಯದಾದ್ಯಂತ ಸಿಸಿಬಿ ಪೊಲೀಸ್ ತಂಡಗಳ ಸಂಚಾರ

ಸಂತೋಷ ಜಿಗಳಿಕೊಪ್ಪ
Published 25 ಜನವರಿ 2019, 20:00 IST
Last Updated 25 ಜನವರಿ 2019, 20:00 IST
ಪೊಲೀಸ್‌ ಇಲಾಖೆ
ಪೊಲೀಸ್‌ ಇಲಾಖೆ   

ಬೆಂಗಳೂರು: ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರಿಂದ ರದ್ದುಪಡಿಸಲಾಗಿದ್ದ ಸಿವಿಲ್ ಕಾನ್‌ಸ್ಟೆಬಲ್ (ಪುರುಷ–ಮಹಿಳೆ) ನೇಮಕಾತಿ ಪರೀಕ್ಷೆಯನ್ನು ಇದೇ 27ರಂದು (ಭಾನುವಾರ) ನಡೆಸಲು ನೇಮಕಾತಿ ವಿಭಾಗ ಸಜ್ಜಾಗಿದ್ದು, ಪುನಃ ಸೋರಿಕೆ ಆತಂಕವಿರುವುದರಿಂದ ‘ಪ್ರಶ್ನೆ‍ಪತ್ರಿಕೆ’ಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ.

ಪರೀಕ್ಷಾ ಕೇಂದ್ರಗಳಿಂದ ಸೋರಿಕೆ?: ‘ಪರೀಕ್ಷೆ ನಡೆಯುವ 12 ಗಂಟೆಗೂ ಮುನ್ನ ಪರೀಕ್ಷಾ ಕೇಂದ್ರದಿಂದಲೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು ಎಂಬುದು ಸಿಸಿಬಿ ತನಿಖೆಯಿಂದ ಗೊತ್ತಾಗಿದೆ. ಹೀಗಾಗಿಯೇ ಈ ಬಾರಿ ಎಲ್ಲ ಕೇಂದ್ರಗಳ ಮೇಲೆ ಹೆಚ್ಚು ನಿಗಾ ಇರಿಸಲಾಗಿದೆ. ಅಲ್ಲಿಯ ಸಿಬ್ಬಂದಿಯ ಪೂರ್ವಾಪರದ ಬಗ್ಗೆ ತಿಳಿದುಕೊಳ್ಳಲು ವಿಶೇಷ ತಂಡ ರಚಿಸಲಾಗಿದೆ’ ಎಂದು ಅಧಿಕಾರಿ ಮಾಹಿತಿ ನೀಡಿದರು.

‘ಪರೀಕ್ಷಾ ಕೇಂದ್ರಗಳಿಗೆ ವಾಹನಗಳಲ್ಲಿ ಪ್ರಶ್ನೆಪತ್ರಿಕೆ ಪೂರೈಕೆ ಮಾಡಲಾಗುತ್ತದೆ. ಆ ವಾಹನಗಳು ಹಾಗೂ ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗುವ ಅಧಿಕಾರಿಗಳ ವಾಹನಗಳಿಗೆ ಜಿಪಿಎಸ್ ಅಳವಡಿಸಲಿದ್ದೇವೆ. ಅದರಿಂದಾಗಿ ವಾಹನಗಳ ಮೇಲೆ ನಿಗಾ ಇಡಲು ಅನುಕೂಲವಾಗಲಿದೆ’ ಎಂದು ಹೇಳಿದರು.

ADVERTISEMENT

ಡಿಸಿಪಿ, ಜಿಲ್ಲಾ ಎಸ್ಪಿಗಳೇ ಹೊಣೆ: ಪರೀಕ್ಷೆಯನ್ನು ಸುಗಮವಾಗಿ ನಡೆಸುವ ಜವಾಬ್ದಾರಿಯನ್ನು ಆಯಾ ಡಿಸಿಪಿ (ಕಮಿಷನರೇಟ್) ಹಾಗೂ ಜಿಲ್ಲಾ ಎಸ್ಪಿಗಳಿಗೆ (ಜಿಲ್ಲೆಗಳಲ್ಲಿ) ವಹಿಸಲಾಗಿದೆ. ಯಾವುದೇ ಅಕ್ರಮ ನಡೆದರೂ ಅವರನ್ನೇ ಹೊಣೆಯನ್ನಾಗಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.

ಮೂರನೇ ಬಾರಿ ದಿನಾಂಕ ನಿಗದಿ: ಕಾನ್‌ಸ್ಟೆಬಲ್‌ಗಳ ನೇಮಕಾತಿಗಾಗಿ 2018ರ ಜೂನ್‌ನಲ್ಲಿ ಅಧಿಸೂಚನೆ ಹೊರಡಿಸಿದ್ದ ನೇಮಕಾತಿ ವಿಭಾಗ, ಆಗಸ್ಟ್19ರಂದು ಪರೀಕ್ಷೆ ನಡೆಸಲು ತೀರ್ಮಾನಿಸಿತ್ತು. ಕೊಡಗು ಸೇರಿ ಹಲವು ನಗರಗಳಲ್ಲಿ ಮಳೆ ಸುರಿದು ಅನಾಹುತಗಳು ಸಂಭವಿಸಿದ್ದರಿಂದ ಪರೀಕ್ಷೆ ಮುಂದೂಡಲಾಗಿತ್ತು.

ಎರಡನೇ ಬಾರಿ ನವೆಂಬರ್ 25ರಂದು ಪರೀಕ್ಷೆ ನಿಗದಿ ಆಗಿತ್ತು. ಅದಕ್ಕೂ ಮುನ್ನಾದಿನ ಪ್ರಶ್ನೆಪತ್ರಿಕೆ ಸೋರಿಕೆ ಆಗಿದ್ದರಿಂದಾಗಿ ಪುನಃ ಪರೀಕ್ಷೆ ರದ್ದುಪಡಿಸಲಾಗಿತ್ತು. ಈಗ ಮೂರನೇ ಜ. 27ರಂದು ಪರೀಕ್ಷೆ ನಿಗದಿಪಡಿಸಲಾಗಿದೆ.

**

ಜಾಲದಲ್ಲಿದ್ದ 120 ಅಭ್ಯರ್ಥಿಗಳು ಡಿಬಾರ್

ಹಲವು ಅಕ್ರಮಗಳ ಕಿಂಗ್‌ಪಿನ್‌ಶಿವಕುಮಾರಯ್ಯ ಅಲಿಯಾಸ್ ಗುರೂಜಿಯೇ (68) ಕಾನ್‌ಸ್ಟೆಬಲ್ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿದ್ದ. ಆತ ಸದ್ಯ ಸಿಸಿಬಿ ಪೊಲೀಸರ ಕಸ್ಟಡಿಯಲ್ಲಿದ್ದಾನೆ.

ಆತನ ಜೊತೆಗಿದ್ದ ಸಹಚರರು ಹಾಗೂ 120 ಅಭ್ಯರ್ಥಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ನೇಮಕಾತಿ ಸಮಿತಿಯ ನಿಯಮಗಳನ್ನು ಉಲ್ಲಂಘಿಸಿ ದುರ್ನಡತೆ ತೋರಿದ ಆರೋಪದಡಿ ಎಲ್ಲ ಅಭ್ಯರ್ಥಿಗಳನ್ನು ಎಡಿಜಿಪಿ ರಾಘವೇಂದ್ರ ಔರಾದಕರ್ ಡಿಬಾರ್ ಮಾಡಿದ್ದರು.

**

2,113:ನೇಮಕಾತಿ ನಡೆಯಲಿರುವ ಕಾನ್‌ಸ್ಟೆಬಲ್ ಹುದ್ದೆಗಳು

1.65 ಲಕ್ಷ:ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು

24:ಪರೀಕ್ಷೆ ನಡೆಯುವ ಜಿಲ್ಲೆಗಳು

ಪರೀಕ್ಷಾ ಅವಧಿ: ಬೆಳಿಗ್ಗೆ 10.30– ಮಧ್ಯಾಹ್ನ 12

**

‘ಪರೀಕ್ಷೆ ನಡೆಸಲು ಯಾವ ಕ್ರಮ ಕೈಗೊಳ್ಳಬೇಕೋ ಅದನ್ನೆಲ್ಲ ಕೈಗೊಂಡಿದ್ದೇವೆ. ಎಲ್ಲವನ್ನೂ ಬಹಿರಂಗವಾಗಿ ಹೇಳಲಾಗದು. ಪರೀಕ್ಷೆ ದಿನದಂದು ಭದ್ರತೆ ಜವಾಬ್ದಾರಿ ಪೊಲೀಸರದ್ದು’

-ರಾಘವೇಂದ್ರ ಔರಾದಕರ,ಎಡಿಜಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.