ADVERTISEMENT

‘ಪಾಲಿಶ್‘ ನೆಪ: ಕಾಳಸಂತೆಗೆ ಪಡಿತರ ಅಕ್ಕಿ

ಕಳ್ಳಸಾಗಣೆಗೆ ‘ಇಸ್ಕಾನ್‌’ ಹೆಸರಿನ ದಾಖಲೆ ಬಳಕೆ

ವಿ.ಎಸ್.ಸುಬ್ರಹ್ಮಣ್ಯ
Published 24 ಮಾರ್ಚ್ 2021, 20:30 IST
Last Updated 24 ಮಾರ್ಚ್ 2021, 20:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಆದ್ಯತಾ ವಲಯದ ಕುಟುಂಬಗಳಿಗೆ(ಬಿಪಿಎಲ್‌) ವಿತರಿಸಲು ಸರ್ಕಾರ ಪೂರೈಸುತ್ತಿರುವ ಪಡಿತರ ಅಕ್ಕಿ ನಗರದಲ್ಲಿರುವ ಕರ್ನಾಟಕ ಆಹಾರ ಪೂರೈಕೆ ನಿಗಮದ (ಕೆಎಫ್‌ಸಿಎಸ್‌ಸಿ) ಉಗ್ರಾಣಗಳಿಂದ ‘ಪಾಲಿಶ್‌’ ನೆಪದಲ್ಲಿ ಬಂಗಾರಪೇಟೆಯ ಅಕ್ಕಿ ಗಿರಣಿಗಳ ಮೂಲಕ ನೇರವಾಗಿ ಕಾಳಸಂತೆಗೆ ತಲುಪುತ್ತಿರುವುದು ಪತ್ತೆಯಾಗಿದೆ.

ಮಾರ್ಚ್‌ 16ರಂದು ಕೆ.ಆರ್‌. ಪುರ ಸಮೀಪದ ಕೆಎಫ್‌ಸಿಎಸ್‌ಸಿ ಉಗ್ರಾಣದಿಂದ ಪಡಿತರ ಅಕ್ಕಿ ಚೀಲಗಳನ್ನು ತುಂಬಿಸಿಕೊಂಡು ಬಂಗಾರಪೇಟೆಗೆ ಹೋಗುತ್ತಿದ್ದ ‘ಕೆಎ–40 6668’ ನೋಂದಣಿ ಸಂಖ್ಯೆಯ ಐಷರ್‌ ಲಾರಿಯನ್ನು ಕೋಲಾರದ ಗಾಜಲದಿನ್ನೆಯಲ್ಲಿ ವಶಕ್ಕೆ ಪಡೆಯಲಾಗಿತ್ತು. ಅದರಲ್ಲಿ 240 ಅಕ್ಕಿ ಚೀಲಗಳಿದ್ದವು. ಅವುಗಳ ಮೇಲೆ ರಾಜ್ಯ ಸರ್ಕಾರವು ಅನ್ನಭಾಗ್ಯ ಮತ್ತಿತರ ಯೋಜನೆಗಳ ಅಡಿಯಲ್ಲಿ ಉಚಿತವಾಗಿ ವಿತರಿಸಲು ಖರೀದಿಸಿದ್ದ ಅಕ್ಕಿ ಎಂಬ ಮಾಹಿತಿಯನ್ನು ಮುದ್ರಿಸಿರುವುದು ಕಂಡುಬಂದಿತ್ತು.

ಅನಾಮಿಕರ ವಿರುದ್ಧ ಎಫ್‌ಐಆರ್‌:ಕೋಲಾರ ತಾಲ್ಲೂಕು ಗ್ರಾಮಾಂತರ ವಿಭಾಗದ ಆಹಾರ ನಿರೀಕ್ಷಕ ಉಮ್ಮರ್ ಬೇಗ್‌ ವಾಜಿದ್‌ ನೀಡಿದ ದೂರಿನಂತೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾ.16ರಂದೇ ಅಗತ್ಯ ವಸ್ತುಗಳ ಕಾಯ್ದೆ–1955ರ ಸೆಕ್ಷನ್‌ 4 ಮತ್ತು 7ರ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಲಾಗಿದೆ.

ADVERTISEMENT

ಮೂಲಗಳ ಪ್ರಕಾರ, ಚಾಲಕನ ಸಮೇತ ಲಾರಿಯನ್ನು ವಶಕ್ಕೆ ಪಡೆಯಲಾಗಿತ್ತು. ಲಾರಿ ಮಾಲೀಕ ಬೆಂಗಳೂರಿನ ನಂದಿನಿ ಬಡಾವಣೆ ನಿವಾಸಿ ಆರ್.ಎಸ್. ಮಣಿ ಮತ್ತು ನಗರದ ಅಕ್ಕಿ ವರ್ತಕರೊಬ್ಬರು ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿಗಳೂ ಲಭ್ಯವಿದ್ದವು. ಆದರೆ, ‘ಅನಾಮಿಕ’ರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತುಮಕೂರು ಗ್ರಾಮಾಂತರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಆಂಜನಪ್ಪ, ‘ಆಹಾರ ಇಲಾಖೆ ಅಧಿಕಾರಿಗಳ ದೂರಿನಂತೆ ಎಫ್‌ಐಆರ್‌ ದಾಖಲಿಸಿ, ಲಾರಿ ಮತ್ತು ಅಕ್ಕಿಯನ್ನು ವಶಪಡಿಸಿಕೊಂಡಿದ್ದೇವೆ. ಸಬ್‌ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಈವರೆಗೆ ಯಾವುದೇ ಆರೋಪಿಗಳು ಪತ್ತೆಯಾಗಿಲ್ಲ’ ಎಂದರು.

ಪಾಲಿಶ್‌ ನೆಪದಲ್ಲಿ ಸಾಗಣೆ: ಕಾನೂನಿನ ಪ್ರಕಾರ, ಒಂದು ಪ್ರದೇಶಕ್ಕೆ ಹಂಚಿಕೆಯಾದ ಪಡಿತರ ಧಾನ್ಯವನ್ನು ಯಾವುದೇ ಕಾರಣ ನೀಡಿ ಇತರೆಡೆಗೆ ಸಾಗಿಸುವಂತಿಲ್ಲ. ಈ ಪ್ರರಣದಲ್ಲಿ ‘ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಇಸ್ಕಾನ್‌ನ ಅಕ್ಷಯ ಪಾತ್ರ ಪ್ರತಿಷ್ಠಾನಕ್ಕೆ ಹಂಚಿಕೆಯಾಗಿದ್ದ ಅಕ್ಕಿಯನ್ನು ಪಾಲಿಶ್‌ಗಾಗಿ ಕೊಂಡೊಯ್ಯಲಾಗುತ್ತಿತ್ತು’ ಎಂಬ ಕಾರಣ ನೀಡಿ ರಕ್ಷಣೆ ಪಡೆಯಲು ಆರೋಪಿಗಳು ಕಸರತ್ತು ನಡೆಸುತ್ತಿದ್ದಾರೆ.

‘ಇಸ್ಕಾನ್‌ ಅಕ್ಷಯಪಾತ್ರ ಪ್ರತಿಷ್ಠಾನಕ್ಕೆ ಹಂಚಿಕೆಯಾಗಿದ್ದ ಅಕ್ಕಿಯನ್ನು ಕೆ.ಆರ್‌.ಪುರದಿಂದ ಬಂಗಾರಪೇಟೆಗೆ ಪಾಲಿಶ್‌ ಮಾಡಲು ಸಾಗಿಸಲಾಗುತ್ತಿತ್ತು. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ ಲಾರಿ ಬಿಡಿಸಿಕೊಳ್ಳಲು ಸಿದ್ಧತೆ ನಡೆಸಿದ್ದೇವೆ’ ಎಂದು ಲಾರಿ ಮಾಲೀಕ ಆರ್‌.ಎಸ್‌. ಮಣಿ ತಿಳಿಸಿದರು.

ನಿಗಮದ ಉಗ್ರಾಣಗಳಿಂದ ಸಗಟು ಸಾಗಣೆದಾರರಿಗೆ ಹಂಚಿಕೆಯಾಗುವ ಪಡಿತರ ಧಾನ್ಯವನ್ನು ನೇರವಾಗಿ ಕಾಳಸಂತೆಗೆ ಸಾಗಿಸಲಾಗುತ್ತದೆ. ಪೊಲೀಸರು, ಆಹಾರ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಾಗ ‘ಪಾಲಿಶ್‌’ ಕಾರಣ ನೀಡುತ್ತಾರೆ. ಬಂಗಾರಪೇಟೆ, ತುಮಕೂರಿನ ಅಕ್ಕಿ ಗಿರಣಿಗಳನ್ನು ತಲುಪಿದ ‘ಪಡಿತರ ಅಕ್ಕಿ’ ಹಿಂತಿರುಗಿ ಬರುವುದೇ ಇಲ್ಲ ಎನ್ನುತ್ತಾರೆ ಅಕ್ಕಿ ಕಳ್ಳಸಾಗಣೆ ಕುರಿತು ಸುಳಿವು ನೀಡಿದ್ದ ಮಾಹಿತಿದಾರರು.

ಸಂಸ್ಥೆಗೆ ಸಂಬಂಧವಿಲ್ಲ‌: ಇಸ್ಕಾನ್‌

‘ಅಕ್ಷಯಪಾತ್ರ ಪ್ರತಿಷ್ಠಾನಕ್ಕೆ ಹಂಚಿಕೆಯಾಗುವ ಆಹಾರ ಧಾನ್ಯಗಳನ್ನು ಹಲವು ವರ್ಷಗಳ ಹಿಂದೆ ಪಾಲಿಶ್‌ಗಾಗಿ ಬಂಗಾರಪೇಟೆಗೆ ಕೊಂಡೊಯ್ಯಲಾಗುತ್ತಿತ್ತು. ಈಗ ನೆಲಮಂಗಲದಲ್ಲೇ ಆ ವ್ಯವಸ್ಥೆ ಇದೆ. ಜಿಲ್ಲೆಯಿಂದ ಹೊರಕ್ಕೆ ಆಹಾರ ಧಾನ್ಯ ಕೊಂಡೊಯ್ಯುತ್ತಿಲ್ಲ. ಈ ಪ್ರಕರಣದಲ್ಲಿ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಂಶಯವಿದೆ’ ಎಂದು ಅಕ್ಷಯ ಪಾತ್ರ ಪ್ರತಿಷ್ಠಾನದ ವಕ್ತಾರ ನವೀನನೀರದ ದಾಸ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.