ADVERTISEMENT

ಸರ್ಕಾರದ ತಾರತಮ್ಯ ನೀತಿಗೆ ಶಾಂತಿ ಸಭೆಯಲ್ಲಿ ಅಸಮಾಧಾನ

ಮೂರು ಸಂತ್ರಸ್ತ ಕುಟುಂಬಗಳನ್ನು ಮುಖ್ಯಮಂತ್ರಿ ಭೇಟಿ ಆಗಬೇಕಿತ್ತಲ್ಲವೇ– ವಿವಿಧ ಸಮುದಾಯಗಳ ಮುಖಂಡರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 11:36 IST
Last Updated 30 ಜುಲೈ 2022, 11:36 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಗುರುವಾರ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಮೂವರು ಯುವಕರ ಕುಟುಂಬದವರನ್ನು ಭೇಟಿ ಆಗಿ ಸಾಂತ್ವನ ಹೇಳಬೇಕಿತ್ತು. ಮೂರೂ ಸಂತ್ರಸ್ತ ಕುಟುಂಬಗಳಿಗೂ ಸಮಾನವಾಗಿ ಪರಿಹಾರ ಘೋಷಿಸಬೇಕಿತ್ತು...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರ ಅಧ್ಯಕ್ಷತೆಯಲ್ಲಿ ಶನಿವಾರ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ವಿವಿಧ ಸಮುದಾಯಗಳ ಮುಖಂಡರು ವ್ಯಕ್ತಪಡಿಸಿದ ಅಭಿಪ್ರಾಯವಿದು.

‘ಪ್ರವೀಣ್‌ ನೆಟ್ಟಾರು ಅವರ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರಿಯ ತನಿಖಾ ಏಜೆನ್ಸಿಗೆ (ಎನ್‌ಐಎ)ವಹಿಸಿದನಿರ್ಧಾರಸರಿಯಲ್ಲ.ಇದರಿಂದಸ್ಥಳೀಯಪೊಲೀಸರಸಾಮರ್ಥ್ಯವನ್ನೇಪ್ರಶ್ನಿಸಿದಂತಾಗಿದೆ. ಸ್ಥಳೀಯ ಪೊಲೀಸರೇ ಈಪ್ರಕರಣದತನಿಖೆಯನ್ನುಮುಂದುವರಿಸುವುದಕ್ಕೆ ಅವಕಾಶಕಲ್ಪಿಸಬೇಕು. ಬೆಳ್ಳಾರೆಯಲ್ಲಿ ಲಾಠಿ ಚಾರ್ಜ್‌ ನಡೆಸಿರುವ ಇಬ್ಬರು ಪೊಲೀಸ್‌ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ. ಈ ನಿರ್ಧಾರವೂ ಪೊಲೀಸರ ನೈತಿಕ ಸ್ಥೈರ್ಯವನ್ನು ಕುಗ್ಗಿಸಲಿದೆ’ ಎಂದೂ ಸಭೆಯಲ್ಲಿ ಭಾಗವಹಿಸಿದ ಕೆಲವರು ಅಸಮಾಧಾನ ತೋಡಿಕೊಂಡರು.

ADVERTISEMENT

‘ಜಿಲ್ಲೆಯಾದ್ಯಂತ ಸಂಜೆ 6 ಗಂಟೆಗೆ ಅಂಗಡಿಗಳಿಗೆ ಬಾಗಿಲು ಹಾಕಿಸಿ ವ್ಯಾಪಾರ ವಹಿವಾಟನ್ನು ನಿಲ್ಲಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಈ ನಿರ್ಧಾರವನ್ನು ಮಾರ್ಪಾಡು ಮಾಡಬೇಕು. ಕನಿಷ್ಠ ರಾತ್ರಿ 8 ಗಂಟೆವರೆಗಾದರೂ ಅಂಗಡಿಗಳು ವಹಿವಾಟು ನಡೆಸುವುದಕ್ಕೆ ಅವಕಾಶ ಕಲ್ಪಿಸಬೇಕು’ ಎಂದು ಕೆಲವರು ಒತ್ತಾಯಿಸಿದರು.

‘ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ಸಂಘರ್ಷದಿಂದ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಆತಿಥ್ಯ ಮತ್ತು ಪ್ರವಾಸೋದ್ಯಮಗಳಿಗೆ ಹಾನಿ ಉಂಟಾಗುತ್ತಿದೆ. ಜಿಲ್ಲೆಯ ಪೊಲೀಸ್‌ನೇಮಕಾತಿಯಲ್ಲಿಹೊರಜಿಲ್ಲೆಗಳಅಭ್ಯರ್ಥಿಗಳೇಹೆಚ್ಚಾಗಿಆಯ್ಕೆಯಾಗುತ್ತಿದ್ದಾರೆ. ಅವರು ತುಳು, ಕೊಂಕಣಿ, ಬ್ಯಾರಿ ಮೊದಲಾದ ಸ್ಥಳೀಯ ಭಾಷೆಯನ್ನು ಕಲಿಯದಿರುವುದು ಕೂಡಾ ಜನರಿಂದ ಮಾಹಿತಿ ಪಡೆಯುವುದಕ್ಕೆ ಸಮಸ್ಯೆಯಾಗಿದೆ‘ ಎಂದೂ ಕೆಲವರು ಅಭಿಪ್ರಾಯಪಟ್ಟರು.

ಇನ್ನಷ್ಟು ಶಾಂತಿ ಸಭೆ: ಜಿಲ್ಲಾಧಿಕಾರಿ

‘ಮುಂಬರುವ ದಿನಗಳಲ್ಲಿ ಸರಣಿ ಶಾಂತಿ ಸಭೆಗಳು ನಡೆಯಲಿವೆ. ಮುಂದಿನ ವಾರ ಚುನಾಯಿತ ಪ್ರತಿನಿಧಿಗಳ ಸಭೆ ನಡೆಸಲಿದ್ದೇವೆ‘ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.

ಶಾಂತಿಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಶಾಂತಿ ಸಭೆಯಲ್ಲಿ ವಿವಿಧ ಸಮುದಾಯಗಳ ಜನರು ಭಾಗವಹಿಸಿದ್ದರು. ಮುಸ್ಲಿಂ ಸಮುದಾಯದ ಮುಖಂಡರು ಸಭೆಯನ್ನು ಬಹಿಷ್ಕರಿಸಿರುವ ವಿಚಾರವನ್ನೂ ಪರಿಶೀಲಿಸುತ್ತೇವೆ. ಇನ್ನೊಂದು ಸಭೆಯನ್ನು ಆಯೋಜಿಸುತ್ತೇವೆ’ ಎಂದರು.

ಶಾಂತಿ ಸಭೆಯಲ್ಲಿ ಮುಸ್ಲಿಂ ಸಮುದಾಯದವರು ಭಾಗವಹಿಸದ ಕುರಿತು ಪ್ರತಿಕ್ರಿಯಿಸಿದ ನಗರ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌, ‘ಅದರ ಅರ್ಥ ಅವರು ಶಾಂತಿ ಕಾಪಾಡಲು ಸಹಕರಿಸುವುದಿಲ್ಲ ಎಂಬುದು ಅದರ ಅರ್ಥವಲ್ಲ. ಶಾಂತಿ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕೆಲವು ಮುಸ್ಲಿಂ ಮುಖಂಡರು ಮೊದಲೇ ತಿಳಿಸಿದ್ದಾರೆ’ ಎಂದರು.

ಶಾಂತಿಸಭೆಯಲ್ಲಿ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾದಗ ಎಡಿಜಿಪಿ ಅಲೋಕ್‌ ಕುಮಾರ್‌, ಪಶ್ಚಿಮ ವಲಯದ ಐಜಿಪಿ ದೇವಜ್ಯೋತಿ ರೇ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಶ್‌ ಸೋನಾವಣೆ ಮತ್ತಿತರರು ಭಾಗವಹಿಸಿದರು.

ಸಮಿತಿಗಳನ್ನು ಬಲಪಡಿಸುತ್ತೇವೆ: ಅಲೋಕ್‌ ಕುಮಾರ್‌

‘ಪೊಲೀಸ್‌ ಠಾಣಾ ಹಂತದಲ್ಲಿ ಗಸ್ತು ಸಮಿತಿ, ಮೊಹಲ್ಲಾ ಸಮಿತಿ ಹಾಗೂ ಶಾಂತಿ ಸಮಿತಿಗಳನ್ನು ಬಲಪಡಿಸಲಿದ್ದೇವೆ. ಜನರ ಜೊತೆಗೆ ಉತ್ತಮ ಬಾಂಧವ್ಯ ಹೊಂದುವ ಉದ್ದೇಶದಿಂದ ಆಗಾಗ ಸಭೆಗಳನ್ನು ಆಯೋಜಿಸಲು ಕ್ರಮ ಕೈಗೊಳ್ಳುತ್ತೇವೆ. ಸೂಕ್ಷ್ಮ ಪ್ರದೇಶಗಳ ನಿವಾಸಿಗಳಲ್ಲಿ ಸ್ಥೈರ್ಯ ತುಂಬುವ ಉದ್ದೇಶದಿಂದ, ಅಂತಹ ಕಡೆಗಳಲ್ಲೂ ಆಗಾಗ ಸಭೆಗಳನ್ನು ಆಯೋಜಿಸುತ್ತೇವೆ’ ಎಂದು ರಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್‌ ತಿಳಿಸಿದರು.

‘ಡ್ರಗ್ಸ್‌ ಹಾಗೂ ಗಾಂಜಾ ಹಾವಳಿಯನ್ನು ಹತ್ತಿಕ್ಕುವಂತೆಯೂ ಶಾಂತಿ ಸಭೆಯಲ್ಲಿ ಅನೇಕರು ಒತ್ತಾಯಿಸಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಶೀಲಿಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತದ ಜೊತೆ ಕೈಜೋಡಿಸುವುದಾಗಿ ಸಭೆಯಲ್ಲಿ ಭಾಗವಹಿಸಿದ್ದವರು ಭರವಸೆ ನೀಡಿದ್ದಾರೆ’ ಎಂದರು.

‘ಕರ್ತವ್ಯ ನಿರ್ವಹಣೆ ವಿಚಾರದಲ್ಲಿ ಅಸಡ್ಡೆ ತೋರುವವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಗುಪ್ತ ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕವನ್ನು ಸರಿಯಾಗಿ ನಿಭಾಯಿಸುವುದು ಆಯಾ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳ ಹೊಣೆ’ ಎಂದು ಪ್ರಶ್ನೆಯೊಂದಕ್ಕೆಎಡಿಜಿಪಿ ಉತ್ತರಿಸಿದರು.

‘ಮುಖ್ಯಮಂತ್ರಿ ಅವರ ಸೂಚನೆ ಮೇರೆಗೆ ಗಡಿ ಪ್ರದೇಶಗಳಲ್ಲಿ ತಪಾಸಣಾ ಠಾಣೆಗಳನ್ನು ಸ್ಥಾಪಿಸಲಾಗಿದೆ. ಅಹಿತಕರ ಘಟನೆಗಳನ್ನು ತಡೆಯುವ ಸಲುವಾಗಿ ಅಗತ್ಯ ಇರುವ ಕಡೆಗಳಲ್ಲಿ ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಿದ್ದೇವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.