ADVERTISEMENT

ವಿಶ್ವೇಶ ತೀರ್ಥರು ಕೃಷ್ಣನಲ್ಲಿ ಸೇರಿಕೊಂಡಿದ್ದಾರೆ: ಎಚ್‌.ಡಿ ದೇವೇಗೌಡ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 8:43 IST
Last Updated 29 ಡಿಸೆಂಬರ್ 2019, 8:43 IST
   

ಬೆಂಗಳೂರು: ‘ಉಡುಪಿಯ ಅಷ್ಟಮಠಗಳ ಪೈಕಿ ಅತ್ಯಂತ ಪ್ರಗತಿಪರವಾಗಿದ್ದವರು ವಿಶ್ವೇಶ ತೀರ್ಥ ಸ್ವಾಮೀಜಿ. ಮಹಾನುಭಾವ ಶ್ರೀಕೃಷ್ಣನಲ್ಲಿಯೇ ಅವರು ಸೇರಿಕೊಂಡಿದ್ದಾರೆ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ’ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸ್ಮರಿಸಿಕೊಂಡರು.

‘ಸಮಾಜದಲ್ಲಿ ಅನೇಕ ಪ್ರಗತಿಶೀಲ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. ಹರಿಜನರ ಅಭಿವೃದ್ಧಿಗಾಗಿ ದುಡಿಯುತ್ತಿದ್ದರು. ಮುಸ್ಲಿಮರಿಗಾಗಿ ಮಠದಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದರು. ಇಂಥ ಕೆಲಸಗಳನ್ನು ನಾವು ಮರೆಯಲು ಆಗುವುದಿಲ್ಲ’ ಎಂದು ದೇವೇಗೌಡರು ನುಡಿದರು. ‘ಉಡುಪಿಯಲ್ಲಿ ಆರು ಪರ್ಯಾಯ ಮಾಡಿದ ಮಹಾನುಭಾವರು ಅವರು. ನನ್ನ ಬಗ್ಗೆ ಅವರಿಗೆ ಅಪಾರ ಪ್ರೀತಿ ಇತ್ತು’ ಎಂದು ನೆನಪಿಸಿಕೊಂಡರು.

ಶ್ರೀಗಳ ನಿಧನ ಹಿನ್ನೆಲೆಯಲ್ಲಿ ಟ್ವೀಟ್‌ ಕೂಡ ಮಾಡಿರುವ ದೇವೇಗೌಡರು, ‘ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಗಳು ಕೃಷ್ಣೈಕ್ಯರಾದರು ಎಂಬ ವಿಷಯ ತೀವ್ರ ಆಘಾತವನ್ನುಂಟುಮಾಡಿದೆ. ಸಮಾಜದ ಅಸಮಾನತೆಗಳ ವಿರುದ್ಧ ಧ್ವನಿಯಾಗಿದ್ದ ಶ್ರೀಗಳ ಚಿಂತನೆಗಳು ನಮ್ಮೆಲ್ಲರಿಗೂ ಮಾದರಿ. ಶ್ರೀಗಳ ಭಕ್ತವೃಂದಕ್ಕೆ ಈ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ,’ ಎಂದು ಪ್ರಾರ್ಥಿಸುತ್ತೇನೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.