ಎಚ್.ಡಿ. ರೇವಣ್ಣ
ಹಾಸನ: ‘ಪೆನ್ ಡ್ರೈವ್ ಹಂಚಿಕೆ ಸಂಬಂಧ ದೂರು ದಾಖಲಾಗಿದ್ದರೂ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ’ ಎಂದು ಎಚ್.ಡಿ ರೇವಣ್ಣ ಪರ ವಕೀಲ ಗೋಪಾಲ ಪ್ರಶ್ನಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪೆನ್ ಡ್ರೈವ್ ಹಂಚಿಕೆ ಸಂಬಂಧ ಜೆಡಿಎಸ್ ಜಿಲ್ಲಾ ಚುನಾವಣಾ ಏಜೆಂಟ್ ಪೂರ್ಣಚಂದ್ರ ತೇಜಸ್ವಿ ಅವರು, ಆರೋಪಿಗಳಾದ ನವೀನ್ ಗೌಡ, ಕಾರ್ತಿಕ್, ಪುಟ್ಟರಾಜು, ಚೇತನ್, ಕ್ವಾಲಿಟಿ ಬಾರ್ ಶರತ್ ಸೇರಿ ಐವರ ವಿರುದ್ಧ ದೂರು ನೀಡಿದ್ದರು. ದೂರು ದಾಖಲಾಗಿ 15 ದಿನ ಕಳೆದರೂ ಏಕೆ ಅವರನ್ನು ಬಂಧಿಸಿಲ್ಲ’ ಎಂದು ಪ್ರಶ್ನಿಸಿದರು.
‘ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದು, 10 ವರ್ಷಕ್ಕೂ ಅಧಿಕ ಶಿಕ್ಷೆ ವಿಧಿಸಲು ಸಾಧ್ಯವಿದೆ. ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆರೋಪಿಗಳ ಜಾಮೀನು ಅರ್ಜಿ ವಜಾ ಮಾಡಿದೆ. ಆದರೂ ಪೊಲೀಸರು ಬಂಧಿಸಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಪ್ರಕರಣ ದಾಖಲಾದ ದಿನವೇ ರೇವಣ್ಣ ಅವರ ಬಂಧನವಾಗುತ್ತದೆ. ಆದರೆ ಹೆಣ್ಣು ಮಕ್ಕಳ ಮಾನಹಾನಿ ಮಾಡುವ ವಿಡಿಯೊ ಹರಿಬಿಟ್ಟವರ ವಿರುದ್ಧ 15 ದಿನ ಕಳೆದರೂ ಕ್ರಮ ಆಗುತ್ತಿಲ್ಲ, ಎಸ್ಐಟಿ ಅಧಿಕಾರಿಗಳು ಇದನ್ನು ಏಕೆ ಗಮನಿಸುತ್ತಿಲ್ಲ’ ಎಂದು ಕೇಳಿದರು.
‘ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಏನು ಮಾಡುತ್ತಿದ್ದಾರೆ? ಅವರಿಗೆ ಸರ್ಕಾರದ ರಕ್ಷಣೆ ಇರುವ ಕಾರಣ ಬಂಧಿಸಿಲ್ಲವೇ? ಅವರ ಬಂಧನವಾಗದಿದ್ದರೆ, ಸಾಕ್ಷಿ ನಾಶ ಮಾಡುವ ಸಾಧ್ಯತೆ ಇದ್ದು, ಕೂಡಲೇ ಬಂಧಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.