ADVERTISEMENT

ಆತಂಕ ದೂರ ಮಾಡಿದ ಪರೀಕ್ಷಾ ವರದಿ

ಶಂಕಿತರ ರಕ್ತ ಪರೀಕ್ಷೆಗೆ ಸಜ್ಜಾಗುತ್ತಿದೆ ಬಿಎಂಸಿಆರ್‌ಐ ಮತ್ತು ಎನ್‌ಐವಿ ಪ್ರಯೋಗಾಲಯ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 10:16 IST
Last Updated 1 ಫೆಬ್ರುವರಿ 2020, 10:16 IST
ಕೊರೊನಾ ವೈರಸ್
ಕೊರೊನಾ ವೈರಸ್   

ಬೆಂಗಳೂರು:ಪುಣೆಯ ರಾಷ್ಟ್ರೀಯ ರೋಗಸೂಕ್ಷ್ಮಾಣು ಅಧ್ಯಯನ ಸಂಸ್ಥೆಯಿಂದ (ಎನ್‌ಐವಿ) ಕೊರೊನಾ ವೈರಸ್ ಶಂಕಿತ 8 ಮಂದಿಯ ವೈದ್ಯಕೀಯ ಪರೀಕ್ಷಾ ವರದಿ ಶುಕ್ರವಾರ ಬಂದಿದ್ದು, ಅವರಿಗೆ ಈ ಸೋಂಕು ತಗುಲಿಲ್ಲ ಎನ್ನುವುದು ದೃಢಪಟ್ಟಿದೆ.

ಚೀನಾದಿಂದ ಬಂದಿದ್ದವರಲ್ಲಿ 13 ಮಂದಿ ಅನಾರೋಗ್ಯಕ್ಕೆ ಒಳಗಾಗಿ,ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆಗೆ (ಆರ್‌ಜಿಐಸಿಡಿ) ದಾಖಲಾಗಿದ್ದರು. ಇವರಲ್ಲಿ 12 ಮಂದಿಗಳ ಪರೀಕ್ಷೆಯ ವರದಿ ಬಂದಿದ್ದು, ಸೋಂಕಿನ ಆತಂಕ ದೂರವಾಗಿದೆ. ಒಬ್ಬ ವ್ಯಕ್ತಿಗೆ ಚಿಕಿತ್ಸೆ ಮುಂದುವರೆಸಲಾಗಿದ್ದು, ವರದಿಗಾಗಿ ವೈದ್ಯರು ಎದುರು ನೋಡುತ್ತಿದ್ದಾರೆ.ಉಳಿದವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, 28 ದಿನಗಳ ವರೆಗೆಆರೋಗ್ಯ ಇಲಾಖೆಯ ವಿಚಕ್ಷಣಾ ದಳದವರು ನಿಗಾ ಇಡಲಿದ್ದಾರೆ.

ಈ ನಡುವೆ, ವಿಲ್ಸನ್ ಗಾರ್ಡನ್‌ ಸುತ್ತಮುತ್ತಲಿನ 19 ಮಂದಿಗೆ ಸೋಂಕು ತಗುಲಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಆತಂಕಕ್ಕೆ ಎಡೆ ಮಾಡಿಕೊಟ್ಟಿತ್ತು. ಇದು ಸತ್ಯಕ್ಕೆ ದೂರ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದರು.

ADVERTISEMENT

ಸಜ್ಜಾಗುತ್ತಿದೆ ಪ್ರಯೋಗಾಲಯ:ಚಿಕಿತ್ಸೆ ಪಡೆದುಕೊಳ್ಳುತ್ತಿರುವವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸುವ ವ್ಯವಸ್ಥೆಪುಣೆಯ ರಾಷ್ಟ್ರೀಯ ರೋಗಸೂಕ್ಷ್ಮಾಣು ಅಧ್ಯಯನ ಸಂಸ್ಥೆಯಲ್ಲಿ (ಎನ್‌ಐವಿ)ಮಾತ್ರವಿತ್ತು. ಅಲ್ಲಿಂದ ವೈದ್ಯದಕೀಯ ಪರೀಕ್ಷಾ ವರದಿ ಬರುವುದು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಹಾಗೂ ನಿಮ್ಹಾನ್ಸ್‌ ಬಳಿಯಿರುವ ಎನ್‌ಐವಿ ಕೇಂದ್ರದಲ್ಲಿ ಶಂಕಿತ ವ್ಯಕ್ತಿಗಳ ರಕ್ತಪರೀಕ್ಷೆಗೆ ಕೇಂದ್ರಗಳನ್ನು ಸಜ್ಜುಗೊಳಿಸಲಾಗುತ್ತಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಪ್ರಕಾಶ್ ಕುಮಾರ್, ‘ರಕ್ತದ ಮಾದರಿಗಳ ಪರೀಕ್ಷೆಗೆ ವೈದ್ಯಕೀಯ ಪ್ರಯೋಗಾಲಯಗಳನ್ನು ನವೀಕರಿಸಲಾಗುತ್ತಿದೆ. ಪರೀಕ್ಷೆ ಸಂಬಂಧ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ. ನಾಳೆಯಿಂದ ಪರೀಕ್ಷೆಗಳನ್ನು ಪ್ರಾರಂಭಿಸಲಾಗುತ್ತದೆ’ ಎಂದು ತಿಳಿಸಿದರು.

ಜ.20ರಿಂದ ಈವರೆಗೆ ಚೀನಾದಿಂದ ಬಂದ4,367 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ ಚೀನಾ ಪ್ರವಾಸ ಮುಗಿಸಿ ಬಂದಿರುವ 21 ಪ್ರಯಾಣಿಕರ ಮೇಲೆ ತೀವ್ರ ನಿಗಾ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.