ADVERTISEMENT

ಪೆರಿಟೋನಿಯಲ್ ಡಯಾಲಿಸಿಸ್ ಕಾರ್ಯಕ್ರಮ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 20:16 IST
Last Updated 13 ಸೆಪ್ಟೆಂಬರ್ 2025, 20:16 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಬೆಂಗಳೂರು: ರಾಜ್ಯದಲ್ಲಿ ಪೆರಿಟೋನಿಯಲ್ ಡಯಾಲಿಸಿಸ್ ಕಾರ್ಯಕ್ರಮ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. 

ಈ ಡಯಾಲಿಸಿಸ್ ಪ್ರಕ್ರಿಯೆಗೆ ಅಗತ್ಯವಿರುವ ಸಾಮಗ್ರಿಗಳ ಖರೀದಿಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ (ಕೆಎಸ್‌ಎಂಎಸ್‌ಸಿಎಲ್) ಮೂಲಕ, ಮೊದಲ ಹಂತದಲ್ಲಿ 350 ರೋಗಿಗಳಿಗೆ ಈ ಸೇವೆ ಒದಗಿಸಲು ಅಗತ್ಯ ಸಾಮಗ್ರಿಗಳನ್ನು ಖರೀದಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. 

ADVERTISEMENT

ರಾಜ್ಯದಲ್ಲಿ ಈಗಾಗಲೇ ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮದಡಿ ಎಲ್ಲ ಜಿಲ್ಲೆಗಳಲ್ಲಿ ಹೀಮೊಡಯಾಲಿಸಿಸ್ ಸೇವೆ ನೀಡಲಾಗುತ್ತಿದೆ. ಈಗ ಮೂತ್ರಪಿಂಡ ತಜ್ಞರು ಇರುವ ಜಿಲ್ಲಾ ಆಸ್ಪತ್ರೆಗಳಲ್ಲಿ ಪೆರಿಟೋನಿಯಲ್ ಡಯಾಲಿಸಿಸ್ ಸೇವೆ ಒದಗಿಸಲಾಗುತ್ತಿದೆ. ಆರಂಭದಲ್ಲಿ ಪ್ರತಿ ಜಿಲ್ಲೆಗೆ ತಲಾ 10 ರೋಗಿಗಳಂತೆ 350 ರೋಗಿಗಳನ್ನು ನಿರ್ದಿಷ್ಟಗೊಳಿಸಲಾಗಿದೆ. ವೈದ್ಯಕೀಯ ತಜ್ಞರು ರೋಗಿಗಳನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಲಾಗಿದೆ. 

ಕ್ಯಾಥಟೆರ್ ಅಳವಡಿಕೆ, ಆಸ್ಪತ್ರೆಯ ವೆಚ್ಚ, ತರಬೇತಿ ಮತ್ತು ಪ್ರಥಮ ಪೆರಿಟೋನಿಯಲ್ ಡಯಾಲಿಸಿಸ್ ಸೆಷನ್ ಸೇರಿ ಪ್ರತಿ ರೋಗಿಗೆ ₹ 13 ಸಾವಿರ ವೆಚ್ಚವಾಗಲಿದ್ದು, ಇದನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಸಾಸ್ಟ್) ವತಿಯಿಂದ ಭರಿಸಲಾಗುತ್ತದೆ. ಪ್ರತಿ ರೋಗಿಗೆ ತಿಂಗಳಿಗೆ 90-120 ಪೆರಿಟೋನಿಯಲ್ ಡಯಾಲಿಸಿಸ್ ಬ್ಯಾಗ್‌ಗಳು ಮತ್ತು ಅಗತ್ಯ ಸಾಮಗ್ರಿಗಳು ಅವಶ್ಯಕತೆ ಇದ್ದು, ಅವುಗಳನ್ನು ಕೆಎಸ್‌ಎಂಎಸ್‌ಸಿಎಲ್ ಮೂಲಕ ಖರೀದಿಸಲಾಗುವುದು.

ಬ್ಯಾಗ್‌ಗಳು ಮತ್ತು ಅಗತ್ಯ ಸಾಮಗ್ರಿಗಳಿಗೆ ಪ್ರತಿ ತಿಂಗಳು ರೋಗಿಯೊಬ್ಬರಿಗೆ ₹26,400 ರಂತೆ 6 ತಿಂಗಳಿಗೆ ಒಟ್ಟು ₹ 5.54 ಕೋಟಿ ಅನುದಾನದ ಅವಶ್ಯಕತೆ ಇದೆ. ಇದನ್ನು ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮದಡಿ ಒದಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.