ADVERTISEMENT

ಪಿಎಫ್‌ಐ ಜತೆ ಸಿದ್ದರಾಮಯ್ಯ ನೆಂಟಸ್ಥಿಕೆ: ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 11:10 IST
Last Updated 28 ಸೆಪ್ಟೆಂಬರ್ 2022, 11:10 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಪಿಎಫ್‌ಐ ಜತೆ ನೆಂಟಸ್ಥಿಕೆ ಇರುವುದರಿಂದಲೇ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆ ಸಂಘಟನೆಯ ಮೇಲಿನ ನಿಷೇಧವನ್ನು ವಿರೋಧಿಸುತ್ತಿದ್ದಾರೆ. ಇವರ ಸರ್ಕಾರದ ಅವಧಿಯಲ್ಲೇ ಪಿಎಫ್‌ಐ ಕಾರ್ಯಕರ್ತರ ಮೇಲಿನ ಕೇಸ್‌ಗಳನ್ನು ಹಿಂದಕ್ಕೆ ಪಡೆದಿದ್ದರು. ಇದಕ್ಕಿಂತ ಸಾಕ್ಷಿ ಬೇಕಾ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶ್ನಿಸಿದರು.

‘ದೇಶದಲ್ಲೇ ಏನೇ ನಡೆದರೂ ಆರ್‌ಎಸ್‌ಎಸ್‌ಗೆ ಸಂಬಂಧ ಕಲ್ಪಿಸುವುದು ಸಿದ್ದರಾಮಯ್ಯ ಅವರ ಜಾಯಮಾನ. ಆರ್‌ಎಸ್ಎಸ್‌ ಹೆಸರು ಹೇಳದೆ ಇದ್ದರೆ ಅವರ ರಾಜಕೀಯವೇ ನಡೆಯುವುದೇ ಇಲ್ಲ’ ಎಂದು ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಬೆಕ್ಕಿನ ಕಣ್ಣಿನಲ್ಲಿ ಇಲಿ ಎಂಬಂತೆ ಸಿದ್ದರಾಮಯ್ಯ ಕಣ್ಣಲ್ಲಿ ಆರ್‌ಎಸ್‌ಎಸ್‌ ಇರುತ್ತದೆ. ಆರ್‌ಎಸ್‌ಎಸ್‌ ಅನ್ನು ಏಕೆ ನಿಷೇಧ ಮಾಡಬೇಕು? ದೇಶ ಭಕ್ತ ಸಂಘಟನೆ ಆಗಿರುವುದರಿಂದಲೇ? ದೀನ–ದಲಿತರಿಗಾಗಿ ಮತ್ತು ಸಂಕಷ್ಟದಲ್ಲಿ ಇರುವವರಿಗಾಗಿ ಕೆಲಸ ಮಾಡುತ್ತಿರುವುದರಿಂದಲೇ? ಈ ದೇಶದ ಸಂಸ್ಕೃತಿ ಮತ್ತು ಪರಂಪೆಯನ್ನು ಉಳಿಸುತ್ತಿರುವುದಕ್ಕಾಗಿ ನಿಷೇಧ ಮಾಡಬೇಕೆ? ದೇಶದ್ರೋಹ ಮತ್ತು ಭಯೋತ್ಪಾದಕ ಸಂಘಟನೆಯ ವಿಚಾರದಲ್ಲಿ ರಾಜಕೀಯ ಪ್ರೇರಿತ ಹೇಳಿಕೆ ನೀಡುವುದು ಸರಿಯಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ಪಿಎಫ್‌ಐ ದೇಶ ವಿರೋಧಿ ಸಂಘಟನೆ:

‘ಪಿಎಫ್‌ಐ ಹಲವು ವರ್ಷಗಳಿಂದ ದೇಶದ್ರೋಹಿ ಚಟುವಟಿಕೆಗಳನ್ನು ನಡೆಸುತ್ತಿದೆ. ಈ ಸಂಘಟನೆಯ ಮೇಲೆ ನಿಷೇಧ ಹೇರಬೇಕು ಎಂದು ಬಿಜೆಪಿ ಮಾತ್ರ ಅಲ್ಲ ಕಮ್ಯುನಿಸ್ಟ್‌ ಸರ್ಕಾರ ಇರುವ ಕೇರಳ, ಕಾಂಗ್ರೆಸ್ ಅಧಿಕಾರ ಇರುವ ರಾಜ್ಯಗಳೂ ಸೇರಿ ಹಲವು ರಾಜ್ಯಗಳು ಕೇಂದ್ರದ ಮೇಲದ ಒತ್ತಡ ಹೇರಿತ್ತಲೇ ಬಂದಿವೆ’ ಎಂದರು.

ಕಾಂಗ್ರೆಸ್‌ ಅವಧಿಯಲ್ಲಿ ‘ಸಿಮಿ’ಯನ್ನು ನಿಷೇಧ ಮಾಡಲಾಗಿತ್ತು. ಅಲ್ಲಿದ್ದವರೇ ಬಳಿಕ ‍ಪಿಎಫ್‌ಐಯನ್ನು ಹುಟ್ಟುಹಾಕಿದರು. ಈ ಸಂಘಟನೆ ಮುಖ್ಯವಾಹಿನಿಯಿಂದ ದೂರ ಸರಿದಿದೆ. ಇದರ ಕಾರ್ಯಕರ್ತರು ವಿಧ್ವಂಸಕ ಕೃತ್ಯ ಎಸಗಲು ವಿದೇಶಗಳಲ್ಲಿ ತರಬೇತಿ ಪಡೆದು ಬರುತ್ತಾರೆ. ವಿದೇಶಗಳಿಂದ ಆದೇಶ ಪಡೆದು ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಅವರ ಚಟುವಟಿಕೆಗಳು ದಮನಕಾರಿ ಆಗಿದ್ದವು. ದೇಶ ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೆಲಸ ಮಾಡುತ್ತಲೇ ಬಂದಿದೆ ಎಂದು ಬೊಮ್ಮಾಯಿ ಹೇಳಿದರು.

ಪಿಎಫ್‌ಐನ ರಾಜಕೀಯ ಘಟಕವಾದ ಎಸ್‌ಡಿಪಿಐ ನೋಂದಾಯಿತ ರಾಜಕೀಯ ಪಕ್ಷ. ಅದನ್ನು ನಿಷೇಧಿಸಲು ಕಾನೂನಿನಲ್ಲಿ ಬೇರೆ ಬೇರೆ ನಿಯಮಾವಳಿಗಳಿವೆ. ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಲಿದೆ. ನಿಷೇಧಗೊಂಡ ಪಿಎಫ್‌ಐ ಸಂಘಟನೆ ಜತೆಗೆ ಯಾರೂ ಸಂಪರ್ಕ ಇಟ್ಟುಕೊಳ್ಳುವಂತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.