ADVERTISEMENT

ಕಚ್ಚಾಟದಲ್ಲಿ ಪಿಲಿಕುಳ ಜೈವಿಕ ಉದ್ಯಾನದ ಹೆಣ್ಣು ಹುಲಿ ವಿಜಯಾ ಸಾವು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 13:13 IST
Last Updated 14 ನವೆಂಬರ್ 2022, 13:13 IST
ಹುಲಿ
ಹುಲಿ    

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನದ ಹೆಣ್ಣು ಹುಲಿ ವಿಜಯಾ ಮೃತಪಟ್ಟಿದೆ.

ಪಿಲಿಕುಳದಲ್ಲೇ ಹುಟ್ಟಿದ್ದ ವಿಜಯಾ ಹುಲಿಗೆ ಎರಡೂವರೆ ವರ್ಷ ತುಂಬಿತ್ತು. ಇತರ ಹುಲಿಗಳ ಜೊತೆ ಇತ್ತೀಚೆಗೆ ನಡೆದ ಕಚ್ಚಾಟದಲ್ಲಿವಿಜಯಾ ತೀವ್ರ ಗಾಯಗೊಂಡಿತ್ತು. ಜೈವಿಕ ಉದ್ಯಾನದ ವೈದ್ಯಾಧಿಕಾರಿ ಡಾ.ವಿಷ್ಣುದತ್, ಡಾ.ಮಧುಸೂಧನ ಹಾಗೂ ಡಾ.ಯಶಸ್ವಿ ಅವರನ್ನು ಒಳಗೊಂಡ ಪಶುವೈದ್ಯರ ತಂಡವು ಈ ಹುಲಿಗೆ ಶಸ್ತ್ರಚಿಕಿತ್ಸೆ ನಡೆಸಿತ್ತು. ಬಳಿಕ ಅದರ ಆರೋಗ್ಯದಲ್ಲೂ ಚೇತರಿಕೆ ಕಂಡುಬಂದಿತ್ತು. ಆದರೆ, ಶುಕ್ರವಾರ ಮಧ್ಯಾಹ್ನ ಹುಲಿಯ ಆರೋಗ್ಯ ಮತ್ತೆ ವ್ಯತ್ಯಯವಾಗಿತ್ತು ಎಂದು ಜೈವಿಕ ಉದ್ಯಾನದ ನಿರ್ದೇಶಕ ಜಯಪ್ರಕಾಶ ಭಂಡಾರಿ ತಿಳಿಸಿದ್ದಾರೆ.

‘ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದಾಗ ಅದರ ಮೂತ್ರಪಿಂಡ ಹಾನಿಗೊಂಡಿರುವುದು ಕಂಡು ಬಂದಿದೆ. ಹುಲಿಯು ಬಹು ಅಂಗಾಂಗ ವೈಫಲ್ಯದಿಂದ ಅಸುನೀಗಿದೆ’ ಎಂದು ಡಾ.ವಿಷ್ಣು ದತ್ ತಿಳಿಸಿದ್ದಾರೆ.

ADVERTISEMENT

‘ಮೃತ ಹುಲಿಯ ಅಂಗಾಂಗಗಳ ಮಾದರಿಗಳನ್ನು ಉನ್ನತ ಪರೀಕ್ಷೆಗಾಗಿ ಉತ್ತರ ಪ್ರದೇಶದ ಬರೇಲಿಯ ಇಜ್ಜತ್ ನಗರ್ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆ (ಐವಿಆರ್‌ಐ) ಹಾಗೂ ಬೆಂಗಳೂರಿನ ಹೆಬ್ಬಾಳದಲ್ಲಿರುವ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ (ಐಎಎಚ್‌ ಆ್ಯಂಡ್‌ ವಿ.ಬಿ) ಕಳುಹಿಸಿಕೊಡಲಾಗಿದೆ’ ಎಂದು ಜಯಪ್ರಕಾಶ್‌ ಭಂಡಾರಿ ತಿಳಿಸಿದ್ದಾರೆ.

ಜೈವಿಕ ಉದ್ಯಾನದ ಹುಲಿಗಳ ಒಟ್ಟು ಸಂಖ್ಯೆ ಈಗ 11ಕ್ಕೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.